ಬೆಳಗಾವಿ : ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ಸವಿನೆನಪಿಗಾಗಿ ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಆಯೋಜನೆ ಮಾಡಿದ್ದ ಎರಡು ಮಹತ್ವದ ಕಾರ್ಯಕ್ರಮಗಳು ಕೇವಲ ರಾಜಕೀಯ ಭಾಷಣಕ್ಕೆ ಸೀಮಿತವಾಗಿ ಗಾಂಧಿ ವೈಭವದ ಕನಸು ಕಂಡಿದ್ದ ಜನತೆಯಲ್ಲಿ ನಿರಾಶೆ ಮೂಡಿಸಿದವು.
ಸುವರ್ಣ ವಿಧಾನಸೌಧದ ಉತ್ತರ ದ್ವಾರದ ಬಳಿ ಬೃಹತ್ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ ಸರ್ಕಾರದಿಂದ ಆಯೋಜನೆಗೊಂಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮವನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಂಡರು
ಮಹಾತ್ಮಾ ಗಾಂಧೀಜಿಯವರು ಸದಾ ಶ್ರೀರಾಮನ ಸ್ಮರಣೆ ಮಾಡುತ್ತಿದ್ದರು ಅವರು ಅಪ್ಪಟ ಹಿಂದೂ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಅವರು ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ. ಹೇ ರಾಮ್ ಎನ್ನುತ್ತಲೇ ಕೊನೆಯುಸಿರೆಳೆದರು. ಆದರೆ ಅವರನ್ನು ಬಿಜೆಪಿಯವರು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಮತ್ತು ಸಂಘ ಪರಿವಾರ ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿ ಎಂದರು.
ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಜೈ ಬಾಪುಜಿ, ಜೈ ಭೀಮ, ಜೈ ಸಂವಿಧಾನ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ವಿಚಾರ ಆಶಯಗಳ ಮೇಲೆ ಬೆಳಕು ಚೆಲ್ಲಬೇಕಿತ್ತು. ಆದರೆ ಕಾಂಗ್ರೆಸ್ನ ಘಟಾನುಘಟಿಗಳು ಈ ಬೃಹತ್ ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಸಂಘ ಪರಿವಾರದ ತೆಗಳಿಕೆಯ ವೇದಿಕೆಯನ್ನಾಗಿ ಮಾಡಿಕೊಂಡರು.