ಉಳ್ಳಾಲ : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು ದರೋಡೆ ಪ್ರಕರಣದ ಬಂಧಿತ ಆರೋಪಿ ಪೊಲೀಸರ ಮಹಜರು ವೇಳೆ ಪರಾರಿಯಾಗಲು ಯತ್ನಿಸಿದ್ದನೆನ್ನಲಾಗಿದ್ದು ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡೇಟು ಹೊಡೆದಿದ್ದಾರೆ.
ಕೋಟೆಕಾರು ಬ್ಯಾಂಕ್ ದರೋಡೆ’ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಮುರುಗನ್ ಡಿ ದೇವರ್, ಕಣ್ಣನ್ ಮಣಿ ಮತ್ತು ಯೋಶುವಾ ರಾಜೇಂದ್ರನ್ ಎಂಬವರನ್ನು ಬಂಧಿಸಿದ್ದರು.
ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಪೊಲೀಸರು ಖುದ್ದಾಗಿ ಮಂಗಳೂರಿಗೆ ಕರೆತಂದಿದ್ದರು ಆರೋಪಿಗಳಲ್ಲಿ ಒಬ್ಬನಾದ ಕಣ್ಣನ್ ಮಣಿ (35) ಎಂಬಾತನನ್ನು ಸ್ಥಳ ಮಹಜರು ನಡೆಸುವುದಕ್ಕಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ಅಲಂಕಾರ ಗುಡ್ಡೆ ಎಂಬಲ್ಲಿನ ಖಾಸಗಿ ನಿರ್ಜನ ಪ್ರದೇಶಕ್ಕೆ ಪೊಲೀಸರು ಮಂಗಳವಾರ ಸಾಯಂಕಾಲ ಕರೆದೊಯ್ದಿದ್ದರು. ಈ ವೇಳೆ ಕಣ್ಣನ್ ಮಣಿ ಸ್ಥಳದಲ್ಲಿದ್ದ ಬಿಯರ್ ಬಾಟಲಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಟೇಪ್ ಆಗಲು ಯತ್ನಿಸಿದ್ದನೆನ್ನಲಾಗಿದೆ. ಸ್ಥಳದಲ್ಲಿದ್ದ ಸಿಸಿಬಿ ಇನ್ಸ್ ಪೆಕ್ಟರ್ ರಫೀಕ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಕಣ್ಣನ್ ದಾಳಿ ಮುಂದುವರಿಸಿದ್ದ ಕಾರಣ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ
ಮೂವರು ಪೊಲೀಸರಿಗೆ ಗಾಯ
ಪ್ರಕರಣದ ತನಿಖಾಧಿಕಾರಿ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ಹೆಚ್.ಎನ್. ಬಾಲಕೃಷ್ಣ, ಸಿಸಿಬಿ ಹೆಚ್ ಸಿ ಆಂಜನಪ್ಪ, ಉಳ್ಳಾಲ ಠಾಣಾ ಪಿಸಿ ನಿತಿನ್ ಎಂಬವರಿಗೆ ಗಾಯವಾಗಿದೆ. ಮೂವರು ಪೊಲೀಸರು ಮತ್ತು ಗುಂಡೇಟು ತಗುಲಿದ ಆರೋಪಿ ಕಣ್ಣನ್ ಮಣಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೂಟೌಟ್ ಘಟನೆ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಗುಂಡು ತಗುಲಿದ ದರೋಡೆ ಆರೋಪಿ ಕಣ್ಣನ್ ಮಣಿ ಮೂಲತಃ ತಮಿಳುನಾಡು ನಿವಾಸಿಯಾಗಿದ್ದರೂ, ಸದ್ಯಕ್ಕೆ ಮುಂಬೈ ನಗರದ ಚೆಂಬೂರಿನಲ್ಲಿ ನೆಲೆಸಿದ್ದ. ಧಾರಾವಿ ಗ್ಯಾಂಗ್ ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಮಣಿಯನ್ನು ಮಂಗಳೂರು ಸಿಸಿಬಿ ಮತ್ತು ಉಳ್ಳಾಲ ಪೊಲೀಸರು ಸ್ಥಳ ಮಹಜರು ನಡೆಸುವ ಸಲುವಾಗಿ ತಲಪಾಡಿ ಬಳಿಯ ಅಲಂಕಾರ ಗುಡ್ಡೆಗೆ ಕರೆದೊಯ್ದಿದ್ದರು. ಶೂಟೌಟ್ ನಡೆದ ಪ್ರದೇಶದಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ರವಿಶಂಕರ್ ನೇತೃತ್ವದ ತಂಡ ಬೀಡು ಬಿಟ್ಟಿದೆ.