ಪ್ರಯಾಗರಾಜ್ : ಇಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು 30 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಘಟನೆಯ ಬೆನ್ನಲ್ಲೇ ಕುಂಭಮೇಳದ ಉಳಿದ ದಿನಗಳು ಮತ್ತು ಪವಿತ್ರ ಸ್ನಾನದ ದಿನಗಳಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿ ಉತ್ತರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರದ ಘಟನೆಗೆ ವಿಐಪಿ ಸಂಸ್ಕೃತಿ ಪಾಲಿಸಿದ್ದೇ ಕಾರಣ ಎಂಬ ವಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಕುಂಭಮೇಳ ಪ್ರದೇಶವನ್ನು ಪ್ರವೇಶಿಸಲು ಅತಿ ಗಣ್ಯರಿಗೆ ನೀಡಲಾಗಿದ್ದ ಪಾಸ್ಗಳನ್ನು ರದ್ದು ಪಡಿಸಲಾಗಿದೆ. ಜೊತೆಗೆ ಯಾವುದೇ ಗಣ್ಯರ ಆಗಮನಕ್ಕೆ 7 ದಿನ ಮೊದಲೇ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಇದರ ಜೊತೆಗೆ ಕುಂಭಮೇಳ ನಡೆವ ಪ್ರದೇಶಕ್ಕೆ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.