Categories
ಕರಾವಳಿ ಸುದ್ದಿ

ದೇಶದಲ್ಲಿ ಸನಾತನ ಬೋರ್ಡ್‌ ಸ್ಥಾಪಿಸಿ

ಉಡುಪಿ : ದೇಶದಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೆ ಸನಾತನ ಬೋರ್ಡ್ ಜಾರಿಗೆ ಬರಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಪೆರ್ಣಂಕಿಲ ಮಹಾಗಣಪತಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇಂದು ಅನೇಕ ದೇವಾಲಯಗಳು ಸರ್ಕಾರದ ಕಪಿಮುಷ್ಟಿಯಲ್ಲಿದೆ. ಅವುಗಳ ಜೀರ್ಣೋದ್ಧಾರ ಆಗುತ್ತಿಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ, ಭಕ್ತರು ನೀಡುವ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ ಎಂದು ಬೇಸರಿಸಿದ ಶ್ರೀಗಳು, ದೇಗುಲದ ಸಂಪತ್ತಿನಿಂದ ಊರಿಗೆ ಶಿಕ್ಷಣ ಸಿಗುವಂತಾಗಬೇಕು, ಊರಿನ ಜನರ ಆರೋಗ್ಯಕ್ಕೆ ಈ ಹಣ ಬಳಕೆಯಾಗಬೇಕು, ಅದಕ್ಕಾಗಿ ಎಲ್ಲ ದೇವಾಲಯಗಳನ್ನು ಸೇರಿಸಿ ಸನಾತನ ಬೋರ್ಡ್ ಸ್ಥಾಪನೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರಯಾಗದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅಭೂತಪೂರ್ವ ವ್ಯವಸ್ಥೆಗಳನ್ನು ಮಾಡಿದ್ದಾರೆ. ಆದರೂ ಕೆಲ ಅನನುಕೂಲತೆ ಆಗಿದೆ. ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಬೇಕು ಅಪಾಯಕ್ಕೆ ಅವಕಾಶ ಮಾಡಿಕೊಡಬಾರದು ಎಂದವರು ಹೇಳಿದರು.

ಗೋಸಂಪತ್ತು ರಕ್ಷಣೆಗೆ ಕರೆ ನೀಡಲಾಗಿದ್ದ ವಿಷ್ಣುಸಹಸ್ರನಾಮ ಶಿವಪಂಚಾಕ್ಷರಿ ನಾಮ ಅಭಿಯಾನಕ್ಕೆ ಅನೇಕ ಪೀಠಾಧಿಪತಿಗಳು, ಮಠಾಧಿಪತಿಗಳು, ಸಂತರು, ಸಮಾಜದಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈಗ ಒಂದು ಹಂತದ ಅಭಿಯಾನ ನಡೆದಿದೆ. ಗೋರಕ್ಷಣೆಗೆ ಸರ್ಕಾರ ಬಗ್ಗದಿದ್ದರೆ ಮತ್ತೆ ನಮ್ಮ ಅಭಿಯಾನ ಮುಂದುವರಿಯುತ್ತದೆ. ಪೀಠಾಧಿಪತಿಗಳು ಸೌಮ್ಯ ಸ್ವರೂಪದಲ್ಲಿ ಹೋರಾಟ ಮಾಡಲು ಸಾಧ್ಯ, ಅದರಂತೆ ಮುಂದುವರಿಯುತ್ತೇವೆ ಎಂದವರು ಎಚ್ಚರಿಕೆ ನೀಡಿದರು.