Home » “ಗೌಜಿ ಗಮ್ಮತ್” ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ
 

“ಗೌಜಿ ಗಮ್ಮತ್” ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

by Kundapur Xpress
Spread the love

ಮಂಗಳೂರು: ಮೋವಿನ್ ಫಿಲಂಸ್ ಲಾಂಛನದಲ್ಲಿ ತಯಾರಾದ “ಗೌಜಿಗಮ್ಮತ್” ತುಳು ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಖ್ಯಾತ ರಂಗಕರ್ಮಿ, ಚಲನ ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ನಿರ್ಮಾಪಕರಾದ ಮೋಹನ್ ಭಟ್ಕಳ್ ಹಾಗೂ ವಿನಾಯಕ ತೀರ್ಥಹಳ್ಳಿ ಅವರ ಶ್ರಮ ಗೌಜಿ ಗಮ್ಮತ್ ಸಿನಿಮಾ ಯಶಸ್ಸು ಕಾಣುವ ಮೂಲಕ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ. ಸಿನಿಮಾವನ್ನು ತುಳುನಾಡಿನ ಸರ್ವಧರ್ಮದ ಜನತೆ ಇಷ್ಟಪಡುವ ಮೂಲಕ ಸಿನಿಮಾ ಯಶಸ್ಸು ಕಾಣಲಿ” ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಅರವಿಂದ್ ಬೋಳಾರ್ ಅವರು “ಶ್ರಮವಹಿಸಿ ನಿರ್ಮಾಣಗೊಂಡು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಗೆಲ್ಲಬೇಕು. ಇದರಿಂದ ತುಳು ಚಿತ್ರ ನಿರ್ಮಾಪಕರಿಗೆ ಇನ್ನಷ್ಟು ಸದಭಿರುಚಿಯ ಸಿನಿಮಾ ಮಾಡಲು ಧೈರ್ಯ ಬರುತ್ತದೆ” ಎಂದರು.
ಚಲನ ಚಿತ್ರ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, “ಗೌಜಿ ಗಮ್ಮತ್ ಸಿನಿಮಾವನ್ನು ಎಲ್ಲಾ ತುಳುವರು ನೋಡಿ ಚಿತ್ರತಂಡವನ್ನು ಆಶೀರ್ವದಿಸಬೇಕು. ತುಳು ಚಿತ್ರರಂಗದ ಎಲ್ಲರೂ ಒಗ್ಗಟ್ಟಾದರೆ ನಮ್ಮ ನೆಲದ ತುಳು ಸಿನಿಮಾ ಯಶಸ್ಸು ಕಾಣಲಿದೆ” ಎಂದರು.
ಅರ್ಜುನ್ ಕಾಪಿಕಾಡ್, ಪ್ರಕಾಶ್ ತೂಮಿನಾಡ್, ನಿರ್ಮಾಪಕರಾದ ವಿನಾಯಕ ತೀರ್ಥಹಳ್ಳಿ, ಮೋಹನ್ ಭಟ್ಕಳ್, ನಿರ್ದೇಶಕ ಎಜೆ ಮಣಿ ಕಾರ್ತಿಕೇಯನ್, ಹಿರಿಯ ನಟಿ ಜಯಶೀಲ, ಜಗನ್ನಾಥ ಶೆಟ್ಟಿ ಬಾಳ, ಮೋಹನ್ ಕೊಪ್ಪಲ, ಪ್ರಭಾಕರ ಬ್ರಹ್ಮಾವರ್, ರಾಮದಾಸ್ ಸಸಿಹಿತ್ಲು, ಗಣೇಶ್ ಕಾಮತ್, ಸಂದೀಪ್ ಬೆದ್ರ, ನಾಯಕ ನಟ ಕರ್ಣ ಉದ್ಯಾವರ, ನಟಿ ಸ್ವಾತಿ ಪ್ರಕಾಶ್ ಶೆಟ್ಟಿ, ಕಿಶೋರ್ ಮೂಡಬಿದ್ರೆ, ಚೇತಕ್ ಪೂಜಾರಿ, ಡಿ ಬಿ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು. ವೀಕ್ಷಿತ್ ಕೆಮ್ತೂರ್ ಕಾರ್ಯಕ್ರಮ ನಿರ್ವಹಿಸಿದರು.
ಗೌಜಿ ಗಮ್ಮತ್ ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಭಾರತ್ ಸಿನಿಮಾ, ಐನಾಕ್ಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾ, ಸುರತ್ಕಲ್ ನಲ್ಲಿ ನಟರಾಜ್, ಸಿನಿ ಗ್ಯಾಲಕ್ಸಿ, ಪುತ್ತೂರಿನಲ್ಲಿ ಅರುಣಾ, ಭಾರತ್ ಸಿನಿಮಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಮೊದಲಾದ ಕಡೆಗಳಲ್ಲಿ ಸಿನಿಮಾ ತೆರೆ ಕಂಡಿದೆ.
ಕಥಾ ಸಾರಾಂಶ
ಸುಂದರ ಕೌಟುಂಬಿಕ ಹಾಸ್ಯವನ್ನಾಧಾರಿತ ಕಥಾ ಹಂದರವಿರುವ ಚಿತ್ರ ಗೌಜಿ ಗಮ್ಮತ್. ಒಂದು ಸಂಸಾರದಲ್ಲಿ ವಿವಿಧ ರೀತಿಯ ಮನಸ್ಥಿತಿಗಳಿರುತ್ತದೆ. ನಾನು ಹೇಳಿದ್ದೇ ಸರಿ, ತಾನು ಮಾಡಿದ್ದೇ ಸರಿ ಎಂಬ ಸ್ಫರ್ಧಾತ್ಮಕ ವ್ಯಕ್ತಿತ್ವಗಳಿರುತ್ತದೆ. ಅದು ಸಮಾಜಕ್ಕೆ ಕೆಲವೊಮ್ಮೆ ಹಾಸ್ಯವಾಗಿ ಕಾಣುತ್ತದೆ, ಕೆಲವೊಮ್ಮೆ ಗಂಭೀರವಾಗಿ ಕಾಣುತ್ತದೆ. ಆದರೆ ಆ ಮನಸ್ಥಿತಿಗಳಿಂದಿರುವ ಭಾವನೆಗಳು ಕೆಲವೊಮ್ಮೆ ಮನಮುಟ್ಟುವಂತಿರುತ್ತದೆ. ಆ ಭಾವನೆಗಳು ಮತ್ತು ಭಾವನೆಗಳ ಉದ್ದೇಶಗಳು ಹಾಗೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಆ ಪಾತ್ರಗಳು ಹೇಗೆ ಬಗೆಹರಿಸುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ತೋರುವ ಕಥೆಯೇ ಗೌಜಿ ಗಮ್ಮತ್

   

Related Articles

error: Content is protected !!