ಪ್ರಸಿದ್ಧ ಪುಣ್ಯಕ್ಷೇತ್ರ ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ಭಕ್ತಾಧಿಗಳ ನೆರವಿನಿಂದ ಸುಮಾರು ಒಂದು ಕೋಟಿ ರೂ. ಗಳಿಗೂ ಮಿಕ್ಕಿ ವೆಚ್ಚದಲ್ಲಿ ನಿರ್ಮಿಸಿದ ದಾರು ಶಿಲ್ಪ ಮೇಲ್ಛಾವಣಿ ಮತ್ತು ರಜತ ವಸಂತ ಮಂಟಪದ ಸಮರ್ಪಣಾ ಸಮಾರಂಭವು ಏ. 23 ರ ಭಾನುವಾರ ಅಕ್ಷಯ ತೃತೀಯಾ ಶುಭ ದಿನದಂದು ಸಂಜೆ 6 ಗಂಟೆಗೆ ನೆರವೇರಲಿದೆ.
ಮಹಾದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿಡೊಡನೆಯೇ ಇಕ್ಕೆಲಗಳಲ್ಲಿನ ಹೆಬ್ಬಾಗಿಲು ಈ ಮೊದಲು ಸಾಧಾರಣ ಗ್ರಾನೈಟ್ ನೆಲಹಾಸು ಮತ್ತು ಆರ್ ಸಿ ಸಿ ಮೇಲ್ ಛಾವಣಿ ಹೊಂದಿತ್ತು. ಅದನ್ನೀಗ ಸುಂದರವಾದ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಮರದ ಮೇಲ್ಛಾವಣಿಯಾಗಿ ಮಾರ್ಪಡಿಸಲಾಗಿದೆ. ಅತಿ ನಾಜೂಕಾದ ಮರದ ಕೆತ್ತನೆಗಳು ಅತ್ಯಾಕರ್ಷಕವಾಗಿವೆ. ಕಂಬಗಳನ್ನೂ ಸುಂದರ ಕೆತ್ತನೆಗಳಿಂದ ಅಲಂಕರಿಸಲಾಗಿದ್ದು ನೋಡುಗರನ್ನು ಸೆಳೆಯುತ್ತದೆ. ಖ್ಯಾತ ಶಿಲ್ಪಿಗಳಾದ ಉಪ್ಪುಂದದ ಸುಕುಮಾರ ಗುಡಿಗಾರ ಮತ್ತು ಕೃಷ್ಣ ಗುಡಿಗಾರರ ತಂಡದವರು ಸುಮಾರು ಒಂದು ವರ್ಷದಿಂದ ಆಹರ್ನಿಷಿ ಶ್ರಮವಹಿಸಿ ಈ ದಾರು ಕಲಾಕೃತಿಗಳನ್ನು ಒಡಮೂಡಿಸಿದ್ದಾರೆ.
ಈ ದಾರು ಶಿಲ್ಪದೊಳಗೆ ನಿತ್ಯರಂಗಪೂಜೆ, ತೊಟ್ಟಿಲು ಸೇವೆ ನಡೆಯುವ ಸ್ಥಳದಲ್ಲಿ ಸುಂದರ ಬೆಳ್ಳಿಯ ವಸಂತ ಮಂಟಪವನ್ನೂ ರಚಿಸಲಾಗಿದೆ. ಇದು ಕೂಡಾ ಅತೀ ಸೂಕ್ಷ್ಮ ವಿನ್ಯಾಸದ ಕಲಾ ಕೆತ್ತನೆಗಳಿಂದ ಸುಂದರವಾಗಿದೆ. ಮರ ಮತ್ತು ಬೆಳ್ಳಿಯ ರಥಗಳ ನಿರ್ಮಾಣ ಹಾಗೂ ಕೆತ್ತನೆ ಕೆಲಸಗಳಲ್ಲಿ ಸಿದ್ಧಹಸ್ತರಾದ ಬೀಜಾಡಿಯ ಪ್ರಭಾಕರ ಆಚಾರ್ಯ ಸಹೋದರರ ತಂಡವು ಈ ರಜತ ಕಲಾಕೃತಿಗಳನ್ನು ನಿರ್ಮಿಸಿದೆ.
ದೇವರ ದೊಡ್ಡರಂಗ ಪೂಜೆ ಉತ್ಸವದಲ್ಲಿ ಈ ರಜತ ವಸಂತ ಮಂಟಪದಲ್ಲಿ ತೊಟ್ಟಿಲು ಸೇವೆ ಮತ್ತು ಅಷ್ಟಾವಧಾನ ಸೇವಾ ಪೂಜೆಗಳನ್ನು ನೆರವೇರಿಸಲಾಗುತ್ತದೆ. ದೇವಾಲಯವನ್ನು ಪ್ರವೇಶಿಸಿದೊಡ ನೆಯೇ ಇಕ್ಕೆಲಗಳ ಈ ಸುಂದರ ದಾರು ಮತ್ತು ರಜತ ಕೆತ್ತನೆಗಳು ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತವೆ. ಇಲ್ಲಿ ನಿಂತು ಎದುರಿನ ಭವ್ಯ ವಿನಾಯಕನನ್ನು ದರ್ಶಿಸಿದಾಗ ಉಂಟಾಗುವ ಆನಂದಾನುಭೂತಿ ವರ್ಣಿಸಲಸಾಧ್ಯ.
ಈ ಬಗ್ಗೆ ಮಾಹಿತಿ ನೀಡಿದ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಶ್ರೀರಮಣ ಉಪಾಧ್ಯಾಯ, ಹಿರಿಯ ಧರ್ಮಧರ್ಶಿಗಳಾದ ಕೆ ಸೂರ್ಯನಾರಾಯಣ ಉಪಾಧ್ಯಾರ ಮಾರ್ಗಧರ್ಶನ ಹಾಗೂ ಭಕ್ತರ ಸಹಕಾರದಿಂದ ಈ ಸುಂದರ ಕೆತ್ತನೆಗಳನ್ನು ನಿರ್ಮಿಸಲಾಗಿದೆ. ಇದರ ಸೌಂದರ್ಯಕ್ಕೆ ಕುಂದುಂಟಾಗದಂತೆ ರಖೋಲೆ ಮಾಡುವುದು ಮುಖ್ಯ. ಯಾವುದೇ ಆರ್ ಸಿ ಸಿ 40 ವರ್ಷದ ನಂತರ ಶಕ್ತಿಗುಂದಿ ಕಳಾಹೀನವಾಗುತ್ತದೆ. ಇಂತಹ ಮೇಲ್ಛಾವಣಿಯಿಂದ ಭಕ್ತರಿಗೆ ತೊಂದರೆ, ಇರಿಸುಮುರುಸಾಗಬಾರದು ಎಂಬ ಉದ್ದೇಶದಿಂದ ಮರದ ಕೆತ್ತನೆಗಳನ್ನು ಅಳವಡಿಸಲಾಗಿದೆ. ಇದು ದೇವಾಲಯದ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಭಕ್ತರಲ್ಲಿ ಭಕ್ತಿ ಭಾವಗಳನ್ನು ಉದ್ದೀಪಿಸುತ್ತದೆ ಎಂದು ವಿವರಿಸಿದರು.