68. ಸ್ವಜನ ವ್ಯಾಮೋಹ
ಸ್ವಜನ ವ್ಯಾಮೋಹವನ್ನು ತ್ಯಜಿಸುವುದು ಅಷ್ಟು ಸುಲಭವೇ? ಗಂಡ, ಹೆಂಡತಿ, ಮಕ್ಕಳು, ಬಂಧುಗಳು, ಮಿತ್ರರು ಎಂದು ನಾವು ಎಷ್ಟೆಲ್ಲ ಬಗೆಯ ಬಂಧುತ್ವದ ಬಂಧನಕ್ಕೆ ನಮ್ಮನ್ನು ಗುರಿಪಡಿಸಿಕೊಂಡಿರುತ್ತೇವೆ! ನಾವು – ನಮ್ಮವರು ಎಂಬ ಭ್ರಾಂತಿಯಲ್ಲೇ ಬದುಕುತ್ತಿರುತ್ತೇವೆ. ಅವರಿಗಾಗಿ ಸಂಪತ್ತು, ಆಸ್ತಿ, ಚಿನ್ನ ಇತ್ಯಾದಿಗಳನ್ನು ಮಾಡಿಡುತ್ತೇವೆ. ಮೂರು ಪೀಳಿಗೆ ಕೂತು ಉಣ್ಣವಷ್ಟು ಸಂಪತ್ತು ಮಾಡಿಬಿಟ್ಟರೂ ಸ್ವಜನ ವ್ಯಾಮೋಹ ಕಡಿಮೆಯಾಗುವುದಿಲ್ಲ. ಇದೆಂತಹ ಹುಚ್ಚು? ಯಾರ ಮೇಲಿನ ಪ್ರೀತಿ, ವ್ಯಾಮೊಹದಿಂದ ನಾವು ಎಷ್ಟೆಲ್ಲ ಕಷ್ಟಪಟ್ಟು, ಧರ್ಮ – ಅಧರ್ಮದ ವ್ಯತ್ಯಾಸವನ್ನೂ ಮರೆತು ಸಂಪತ್ತು ಮಾಡಿಟ್ಟೆವೋ ಅವರು ಅಷ್ಟೇ ಪ್ರೀತಿ – ವ್ಯಾಮೋಹವನ್ನು ನಮ್ಮ ಮೇಲೆ ತೋರುವರೋ ಇಲ್ಲವೋ ಎಂಬುದನ್ನು ಕಿಂಚಿತ್ತೂ ಸಂದೇಹಿಸುವ ಗೋಜಿಗೆ ಕೂಡ ನಾವು ಹೋಗುವುದಿಲ್ಲ. ಆದರೆ ಅವರ ನಿಜ ಬಣ್ಣವು ಒಂದಲ್ಲ ಒಂದು ದಿನ ಬಯಲಾಗುವುದು ನಿಶ್ಚಿತ. ಆದರೆ ಹಾಗೆ ಆಗುವಾಗ ನಿಜಕ್ಕೂ ಬಯಲಾಗುವುದು ಅವರ ಬಣ್ಣ ಮಾತ್ರ ಅಲ್ಲ; ನಮ್ಮ ಭ್ರಾಂತಿ ಕೂಡ! ಬದುಕಿನ ಕಠೋರ ಸತ್ಯ ಏನು ಎಂಬ ವಿಚಾರ ಆಗಲೇ ಹೊಳೆಯುವುದು. ನಮ್ಮಲ್ಲಿನ ಸ್ವಜನ ವ್ಯಾಮೋಹ ಪ್ರವೃತ್ತಿ ಎಷ್ಟೊಂದು ಬಾಲಿಶ ಎನ್ನುವುದು ಕೂಡ ಆಗಲೇ ನಮಗೆ ಮನವರಿಕೆಯಾಗುವುದು. ಶಂಕರಾಚಾರ್ಯರು ಈ ಕಠೋರ ಸತ್ಯದ ಬಗ್ಗೆಯೇ ನಮ್ಮನ್ನು ಎಚ್ಚರಿಸುತ್ತಾರೆ. ಧನದಾಹವನ್ನು ಬದಿಗೊತ್ತಿ ಒಂದು ಕ್ಷಣವಾದರೂ ನೀನು ಯೋಚಿಸು – ಈ ಐಸಿರಿ ಯಾರಿಗಾಗಿ, ಯಾವುದಕ್ಕಾಗಿ? ಬರುವಾಗ ಏನನ್ನೂ ನೀನು ತಂದವನಲ್ಲ; ಹೋಗುವಾಗ ಏನನ್ನೂ ಕೊಂಡೊಯ್ಯುವ ಹಾಗಿಲ್ಲ. ಬದುಕಿನ ನಿಜ ಸಂತಸ ಇರುವುದು ಗಳಿಸಿದಷ್ಟರಲ್ಲೇ ತೃಪ್ತಿಪಡೆಯುವುದರಲ್ಲಿ; ಅಷ್ಟನ್ನು ಮಾತ್ರವೇ ಭೋಗಿಸುವುದರಲ್ಲಿ! ಬದುಕಿನ ಸತ್ಯವೇ ಇದು. ಸಂಪತ್ತುಗಳಿಸುವುದು ಸಮಸ್ಯೆಯೇ ಅಲ್ಲ; ಎಷ್ಟು ಗಳಿಸಿದರೆ ಸಾಕು ಎಂಬ ತೀರ್ಮಾನಕ್ಕೆ ಬರುವುದೇ ದೊಡ್ಡ ಸಮಸ್ಯೆ. ಅದುವೇ ನಮ್ಮೆಲ್ಲ ಸಮಸ್ಯೆಗಳ, ದುಃಖಗಳ ಮೂಲ!