Home » ಮತ್ಸರವೆಂಬ ಜಠರಾಗ್ನಿ
 

ಮತ್ಸರವೆಂಬ ಜಠರಾಗ್ನಿ

by Kundapur Xpress
Spread the love
  1. ಮತ್ಸರವೆಂಬ ಜಠರಾಗ್ನಿ

ದೈನಂದಿನ ಬದುಕಿನಲ್ಲಿ ನಾವು ಹಣಕ್ಕಿಂತಲೂ ಹೆಚ್ಚಾಗಿ ಸಂಪಾದಿಸುವುದು ಯಾವುದನ್ನು? ಪ್ರಶ್ನೆ ವಿಚಿತ್ರವೆನಿಸಬಹುದಾದರು ಅದರ ಉತ್ತರ ಮಾತ್ರ ವಿಚಿತ್ರವಲ್ಲ. ಸೂಕ್ಷ್ಮವಾಗಿ ನಮ್ಮ ದೈನಂದಿನ ವ್ಯಾವಹಾರಿಕ ಬದುಕನ್ನು ನಾವು ಅವಲೋಕಿಸಿದರೆ ನಾವು ಇತರರೊಂದಿಗೆ ಸಂಪರ್ಕ, ಸಂವಹನದಲ್ಲಿ ಗಳಿಸುವ ಕೋಪ, ತಾಪ, ಕ್ಲೇಶ, ದ್ವೇಷವೇ ನಾವು ಸಂಪಾದಿಸುವ ಹಣಕ್ಕಿಂತ ಎಷ್ಟೋ ಅಧಿಕ. ಇದಕ್ಕೆ ಮೂಲ ಕಾರಣವೇ ನಮ್ಮ ದುರಭಿಮಾನದ ಪ್ರವೃತ್ತಿ. ಇದನ್ನು ನಿಗ್ರಹಿಸದೆ ಬದುಕಿನಲ್ಲಿ ಆನಂದವನ್ನು ಪಡೆಯುವುದಾದರೂ ಹೇಗೆ? ಸಂತೋಷದಿಂದ ಇರುವುದಾದರೂ ಹೇಗೆ? ದುರಭಿಮಾನದ ಫಲವಾಗಿ ಇತರರ ಏಳಿಗೆ ಕೂಡ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಹಾಳು ಮಾಡುವ ಸಂಗತಿಯೇ ಆಗಿದೆ! ಮತ್ಸರವೆಂಬ ಜಠರಾಗ್ನಿಯಲ್ಲಿ ಬೇಯುವ ದೇಹದ ಆರೋಗ್ಯ ಸುಸ್ಥಿತಿಯಲ್ಲಿ ಉಳಿಯಲು ಸಾಧ್ಯವೇ? ಸುಖ, ಸಂತೋಷ, ಐಶ್ವರ್ಯ, ಅಂತಸ್ತು, ಅಧಿಕಾರ ನನಗಿಲ್ಲವಲ್ಲ ಎಂಬ ದುಃಖಕ್ಕಿಂತಲೂ ನೂರುಪಟ್ಟು ದುಃಖ ತರುವ ಸಂಗತಿ ಯಾವುದು? ಅವೆಲ್ಲ ಮತ್ತೊಬ್ಬನಲ್ಲಿ ಇವೆ ಎಂಬುದರಿಂದ ಹುಟ್ಟುವ ಮತ್ಸರ! ಮತ್ಸರವೆಂಬ ಜಠರಾಗ್ನಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಶಮನ ಮಾಡಿದ ವಿನಾ ದೇಹದ ಆರೋಗ್ಯ ಸುಧಾರಿಸುವುದಿಲ್ಲ. ಹಾಗೆಯೇ ಮನಸ್ಸಿನ ಆರೋಗ್ಯವೂ ಸುಸ್ಥಿತಿಯಲ್ಲಿ ಇರುವುದಿಲ್ಲ. ಸ್ಪರ್ಧಾತ್ಮಕವಾದ ಆಧುನಿಕ ಜಗತ್ತಿನಲ್ಲಿ ಇಂದು ಮನುಷ್ಯನನ್ನು ಕಾಡುವ ದೊಡ್ಡ ದೊಡ್ಡ ರೋಗಗಳಲ್ಲಿ ಮಾನಸಿಕ ಅಸ್ವಾಸ್ಥ್ಯಕ್ಕೆ ಅಗ್ರ ಸ್ಥಾನ ಲಭಿಸಿದೆ! ಜಗತ್ತಿನೆಲ್ಲಡೆ ಬಹುಸಂಖ್ಯೆಯ ಜನರನ್ನು ಡಿಪ್ರೆಶನ್ ಕಾಡುತ್ತಿದೆ. ಇದಕ್ಕೆ ಮೂಲ ಕಾರಣ ದ್ವೇಷ ಮತ್ತು ಅಸೂಯೆ. ಸಹಿಷ್ಣುತೆ ಇಲ್ಲದಿರುವುದೇ ದ್ವೇಷಾಸೂಯೆಗೆ ಕಾರಣ. ಸಹಿಷ್ಣುತೆ ಎನ್ನುವುದು ಎಲ್ಲಿಂದ ಬರಬೇಕು? ಸಮತ್ವವನ್ನು ಕಾಪಿಡುವ ಮೂಲಕವೇ ಮನಸ್ಸಿನ ಮೇಲೆ ನಾವು ನಿಯಂತ್ರಣವನ್ನು ಪಡೆಯಬಲ್ಲೆವು.

   

Related Articles

error: Content is protected !!