- ಆತ್ಮಾನಂದ ಪ್ರಾಪ್ತಿ
ನಾವು ಮಾಡಬೇಕಾದ ಕರ್ಮಗಳನ್ನು ಕೌಶಲದಿಂದ ಮಾಡಿದಾಗಲೇ ಅದು ಯೋಗದ ಔನ್ನತ್ಯವನ್ನು ಪಡೆಯುತ್ತದೆ. ದೇಹ ಮತ್ತು ಮನಸ್ಸಿನ ಶಕ್ತಿಯನ್ನು ಮೇಳೈಸುವ ಮೂಲಕ ಆತ್ಮಾನಂದ ಪಡೆಯುವುದನ್ನೇ ಯೋಗವೆಂದು ತಿಳಿಯಬಹುದು. ಕರ್ಮಮಾಡುವುದರಲ್ಲಿ ಚರುರತೆಯೇ ಯೋಗ ಎಂದು ಗಿತೆಯಲ್ಲಿ ಕೃಷ್ಣ ಹೇಳಿದ್ದಾದರೂ ಯಾಕೆ ಎಂಬುದನ್ನು ನಾವು ವಿಚಾರ ಮಾಡಬೇಕು. ಇದನ್ನು ನಾವು ನಮ್ಮ ದೈನಂದಿನ ಕಾರ್ಯಚಟುವಟಿಕೆಗಳ ದೃಷ್ಟಿಯಿಂದಲು ಅವಲೋಕಿಸಬಹುದು. ಜೀವನ ನಿರ್ವಹಣೆಗಾಗಿ ನಾವೆಲ್ಲರೂ ಒಂದಲ್ಲ ಒಂದು ಕರ್ಮದಲ್ಲಿ ತೊಡಗಿರುವೆವಷ್ಟೆ? ಆದರೆ ಸಾಮಾನ್ಯವಾಗಿ ನಾವು ಮಾಡುವ ಆ ಕೆಲಸ ನಮ್ಮೆಲ್ಲರ ದೃಷ್ಟಿಯಲ್ಲಿ ಹೊಟ್ಟೆಪಾಡಿಗಾಗಿ ಮಾಡಲೇಬೇಜಾಗಿರುವ ‘ಅನಿವಾರ್ಯ ಕರ್ಮ’ವೇ ಆಗಿ ಬಿಟ್ಟಿದೆ. ಹಾಗಾಗಿ ನಮಗೆ ಆ ಕರ್ಮದಲ್ಲಿ ಆನಂದ ಸಿಗುವುದಿಲ್ಲ. ತೃಪ್ತಿ ಸಿಗುವುದಿಲ್ಲ. ಮನಶ್ಯಾಂತಿ ಲಭಿಸುವುದಿಲ್ಲ! ಏಕೆ ಹೀಗೆ? ಪ್ರಶ್ನೆಯೇನೋ ನಮ್ಮ ಮುಂದೆ ಇದೆ. ಆದರೆ ಉತ್ತರ ಮಾತ್ರ ಇಲ್ಲ. ದಿನಂಪ್ರತಿ ಮಾಡುವ ಕೆಲಸ ಒಂದೇ ಬಗೆಯದಾದರೂ ತಪ್ಪುಗಳನ್ನು ಎಸಗುತ್ತಲೇ ಇರುತ್ತೇವೆ. ಸಹೋದ್ಯೋಗಿಗಳೊಡನೆ ಸಿಟ್ಟುಗೇಳುತ್ತೇವೆ. ವಾಗ್ಯುದ್ಧಕ್ಕೂ ಇಳಿಯುತ್ತೇವೆ. ನಮ್ಮ ತಪ್ಪುಗಳನ್ನು ಇತರರ ಮೇಲೆ ಹಾಕುವ ತಂತ್ರೋಪಾಯಗಳನ್ನು ಹೊಸೆಯುತ್ತಲೇ ಇರುತ್ತೇವೆ. ಮೇಲಧಿಕಾರಿಗಳ ಮೇಲೆ ಕೋಪ, ಅಸಹನೆಯನ್ನು ತೋರುತ್ತಲೇ ಇರುತ್ತೇವೆ. ‘ಈ ಕರ್ಮ ನನ್ನ ಬಂಧುಗಳಿಗೂ ಬೇಡ; ಶತ್ರುಗಳಿಗೂ ಬೇಡ. ನನಗೆ ಇಲ್ಲಿ ‘ಜಾಬ್ ಸ್ಯಾಟಿಸ್ಫ್ಯಾಕ್ಷನ್ನೇ ಇಲ್ಲ…..’ ಎಂದೆಲ್ಲ ಒಟಗುಟ್ಟುತ್ತಿರುತ್ತೇವೆ. ಪರಿಣಾಮವಾಗಿ ಟೆನ್ಶನ್, ಬಿಪಿ, ಡಯಾಬಿಟಿಸ್ ಮುಂತಾಗಿ ಏನೇನನ್ನೆಲ್ಲ ಆಹ್ವಾನಿಸುತ್ತೇವೆ. ನಾವು ಮಾಡುವ ಪ್ರತಿಯೊಂದು ಕರ್ಮದಲ್ಲಿ ತೃಪ್ತಿ, ಆನಂದ ಪಡೆಯಬೇಕಿದ್ದರೆ ಅದನ್ನು ದೇವರ ಪ್ರೀತ್ಯರ್ಥವಾಗಿ ಕರ್ತವ್ಯ ಪ್ರಜ್ಞೆಯಿಂದ ಫಲಾಪೇಕ್ಷೆಯಿಲ್ಲದೆ ಮಾಡಬೇಕು. ಆಗ ಅದರ ನಿರ್ವಹಣೆಯಲ್ಲಿ ಚಾತುರ್ಯ ಪ್ರಾಪ್ತವಾಗುತ್ತದೆ. ಅದುವೇ ಕರ್ಮಯೋಗವೆನಿಸಿಕೊಳ್ಳುತ್ತದೆ.