Home » ಕೃಷ್ಣನ ದೃಷ್ಟಾಂತ
 

ಕೃಷ್ಣನ ದೃಷ್ಟಾಂತ

by Kundapur Xpress
Spread the love
  1. ಕೃಷ್ಣನ ದೃಷ್ಟಾಂತ

ಕರ್ಮಕ್ಕಾಗಲೀ ಅದರ ಫಲಕ್ಕಾಗಲೀ ಕಟ್ಟುಬೀಳದೆ ಸದಾ ಕರ್ಮನಿರತರಾಗುವ ಮೂಲಕವೇ ನಾವು ನಮ್ಮ ಧರ್ಮವನ್ನು ನಿಭಾಯಿಸಬೇಕು ಎಂದು ಕೃಷ್ಣ ಹೇಳುವಾಗ ತನ್ನನ್ನೇ ಉದಾಹರಣೆಯಾಗಿ ಕಾಣಿಸುವ ಪರಿ ಅನನ್ಯವಾಗಿದೆ. ಶ್ರೀ ಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ. ‘ಅರ್ಜುನ, ನನ್ನನ್ನು ನೋಡು. ನಾನೊಂದು ಕ್ಷಣಮಾತ್ರವೂ ಕರ್ಮ ಮಾಡುವುದನ್ನು ನಿಲ್ಲಿಸಿದೆನಾದರೆ ಈ ವಿಶ್ವವೇ ನಾಶವಾಗಿ ಹೋಗುವುದು. ಈ ಕರ್ಮದಿಂದ ನನಗೇನಾಗಬೇಕು? ಏನೂ ಇಲ್ಲ. ಏಕೆ ಎನ್ನುವಿಯೋ? ಈ ವಿಶ್ವಕ್ಕೆಲ್ಲ ನಾನೇ ಒಡೆಯ. ಕರ್ಮ ಮಾಡುವುದರಿಂದ ನನಗೆ ಪ್ರಾಪ್ತವಾಗುವ ಲಾಭ ಯಾವುದೂ ಇಲ್ಲ. ಆದರೂ ನಾನು ಕರ್ಮವನ್ನು ಆಚರಿಸುತ್ತೇನೆ. ಏಕೆಂದರೆ ಈ ಪ್ರಪಂಚವನ್ನು ನಾನು ಪ್ರೀತಿಸುತ್ತೇನೆ.’ ಕೃಷ್ಣನ ಮಾತಿನಲ್ಲಿರುವ ಭಾವ ಎಷ್ಟೊಂದು ಉದಾತ್ತ! ಆ ನಿಷ್ಕಳಂಕವಾದ ಪ್ರೀತಿಯಲ್ಲಿ ಎಳ್ಳಷ್ಟಾದರೂ ಸ್ವಾರ್ಥ ಇದ್ದೀತೇ? ಅದನ್ನು ಅರ್ಥಮಾಡಿಕೊಳ್ಳುವುದು ನಮ್ಮಿಂದ ಸಾಧ್ಯವೇ? ಪ್ರಾಪಂಚಿಕ ಬದುಕಿನಲ್ಲಿ ನಮ್ಮ ‘ಪ್ರೀತಿ’ ಅತ್ಯಂತ ಸ್ವಾರ್ಥಪರ. ಪ್ರಿಯಕರನ ಪ್ರೀತಿಯಲ್ಲಂತೂ ಇದು ಮತ್ತಷ್ಟು ತೀವ್ರ. ಸದಾ ಕಾಲ ಆಕೆ ತನ್ನ ಕಾಲಬುಡದಲ್ಲೇ ಇರಬೇಕು. ತನ್ನೆಲ್ಲ ದೈಹಿಕ, ಮಾನಸಿಕ ಕಾಮನೆಗಳನ್ನು ಆಕೆ ಪೂರೈಸಬೇಕು. ಆಕೆ ಸ್ವಲ್ಪ ದೂರವಾದರೆ ಉಂಟಾಗುವ ವಿರಹದ ಭಾವದಲ್ಲಿ ಈತ ಎಂತಹ ವಿಧ್ವಂಸಕ ಕೃತ್ಯವನ್ನೂ ಮಾಡಿಯಾನು. ತಂದೆ-ತಾಯಿಯ ಮುದ್ದಿನ ಕೂಸಾಗಿ ಬೆಳೆದು ಯುವಕನಾದ ಪುತ್ರನಿಗೆ ಹೆತ್ತವರ ಮೇಲಿರುವ ಪ್ರೀತಿ ಎಷ್ಟು? ಅವರ ಮೇಲೆ ಇರುವುದಕ್ಕಿಂತಲೂ ಮಿಗಿಲಾದ ಪ್ರೀತಿ ಈತನಿಗೆ ಇರುವುದು ಅವರು ಕೂಡಿಟ್ಟ ಸಂಪತ್ತಿನ ಮೇಲೆ. ಅದು ತನಗೆ ಬೇಕೆಂದಾಗ ದಕ್ಕದಿದ್ದರೆ ಹೆತ್ತವರನ್ನು ಹಿಂಸಿಸಿ ಕೊಲ್ಲಲೂ ಇವನು ಹೇಸಲಾರ. ಮುತ್ತುಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯುವ ಪುತ್ರರ ‘ಪ್ರೀತಿ’ಯನ್ನು ನಾವಿಂದು ಹಲವಡೆ ಕಾಣಬಹುದು. ಆ ಪ್ರೀತಿಯಲ್ಲಿ ಅಡಕವಾಗಿರುವುದು ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರ, ಅಹಂಕಾರವಲ್ಲದೆ ಬೇರೇನೂ ಅಲ್ಲ.

   

Related Articles

error: Content is protected !!