Home » ಪಥ ಭ್ರಷ್ಟತೆಯ ದುರಂತ
 

ಪಥ ಭ್ರಷ್ಟತೆಯ ದುರಂತ

by Kundapur Xpress
Spread the love
  1. ಪಥ ಭ್ರಷ್ಟತೆಯ ದುರಂತ

ಪ್ರಾಪಂಚಿಕ ಬದುಕಿನಲ್ಲಿ ವ್ಯಸ್ತವಾಗಿರುವ ನಮಗೆ ಕರ್ಮಯೋಗದ ಮೂಲಕವೂ ಮೋಕ್ಷಪ್ರಾಪ್ತಿ ಸಾಧ್ಯ ಎಂಬ ಕೃಷ್ಣನ ಮಾತು ಅತ್ಯಂತ ಅಪ್ಯಾಯಮಾನವಾಗಿದೆ  . ಕರ್ಮವನ್ನು ಸರ್ವದಾ ಆಚರಿಸುತ್ತಿರಬೇಕು, ಆದರೆ ಕರ್ಮಕ್ಕಾಗಲೀ ಅದರ ಫಲಕ್ಕಾಗಲೀ ಕಟ್ಟುಬೀಳ ಕೂಡದು ಎಂಬ ಎಚ್ಚರಿಕೆ ಮಾತ್ರ ತುಂಬ ಅಗತ್ಯ. ಎಚ್ಚರಿಕೆಯನ್ನು ರೂಢಿಸಿಕೊಳ್ಳುವುದೇ ಪ್ರಾಪಂಚಿಕ ಬದುಕಿನಲ್ಲಿ ನಮಗೆ ಎದುರಾಗುವ ಅತಿ ದೊಡ್ಡ ಸವಾಲು. ನಮ್ಮೆಲ್ಲ ಕರ್ಮಗಳನ್ನು ನಾವು ಭಗವದರ್ಪಣೆಯಲ್ಲೇ ಮಾಡಬೇಕು; ದೇವರ ಪ್ರೀತ್ಯರ್ಥವಾಗಿ ಮಾಡಬೇಕು, ಕರ್ತವ್ಯಪ್ರಜ್ಞೆಯಿಂದ ಮಾಡಬೇಕು ಎಂದು ಕೃಷ್ಣ ಒತ್ತಿ ಹೇಳಲು ಕಾರಣ ನಮ್ಮನ್ನು ಕರ್ಮಬಂಧನದಿಂದ ತಪ್ಪಿಸುವುದೇ ಆಗಿದೆ. ನಮ್ಮ ದೃಷ್ಟಿಯಲ್ಲಿ ನಾವು ಯಾವುದೇ ಒಂದು ಸಾಧನೆಯ ಕಾರ್ಯ ಮಾಡಿದಾಗ ಒಡನೆಯೇ ನಮ್ಮಲ್ಲಿ ಸಾಧನೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ನಮ್ಮ ಕಾರ್ಯಸಾಮಥ್ರ್ಯವನ್ನು ಎಲ್ಲರೂ ಹಾಡಿ ಕೊಂಡಾಡುವರೆಂಬ ಭಾವನೆ ಬೆಳೆಯುತ್ತದೆ. ನಿಜಕ್ಕೂ ಇದು ನಮ್ಮ ಆಂತರ್ಯದಲ್ಲಿ ಉಂಟುಮಾಡುವುದು ಅಹಂಕಾರಅಹಂಭಾವನ್ನಲ್ಲದೆ ಬೇರೇನನ್ನೂ ಅಲ್ಲ. ಅಹಂಕಾರಅಹಂಭಾವಗಳ ಪ್ರಭಾವ ನಮ್ಮ ಮೇಲೆ ಎಷ್ಟು ಉಂಟಾಗುವುದೆಂದರೆ ಇನ್ನೊಂದು ಸಾಧನೆಯ ಕಾರ್ಯವನ್ನು ಕೈಗೊಳ್ಳಲು ಅದು ಅಡ್ಡ ಬರುತ್ತದೆ. ಹಿಂದಿನ ಸಾಧನೆಯನ್ನು ಮತ್ತು ಆದರಿಂದ ಲಭಿಸಿದ ಜನಪ್ರಶಂಸೆಯನ್ನು ಪದೇ ಪದೇ ಮೆಲುಕು ಹಾಕುತ್ತಾ ನಿಷ್ಕ್ರಿಯತೆಯಿಂದ ಕಾಲಕಳೆಯುವ ಪ್ರವೃತ್ತಿ ಉಂಟಾಗುತ್ತದೆ. ನಮ್ಮ ಕರ್ಮದ ಮೇಲಿನ ಮೋಹ ಹಾಗೂ ನಾನೇ ಅದರ ಕರ್ತೃವೆಂಬ ಅಹಂಭಾವದಿಂದಾಗಿ ನಮ್ಮಲ್ಲಿನ ನೈಜ ಕಾರ್ಯ ಸಾಮರ್ಥ್ಯಕ್ಕೆ ಗ್ರಹಣ ಉಂಟಾಗುತ್ತದೆ. ಹಾಗಾಗಿ ಕರ್ಮಯೋಗಿಗಳಾಗಿ ಸಾಧನೆಯ ಪಥದಲ್ಲಿ ಸಾಗಲು ಅಸಾಧ್ಯವಾಗುತ್ತದೆ. ನಮ್ಮೊಳಗಿನ ಅಹಂಕಾರ, ಅಹಂಭಾವಗಳೇ ನಮ್ಮ ಶತ್ರುಗಳಾಗಿ ನಮ್ಮನ್ನು ಪಥಭ್ರಷ್ಟರನ್ನಾಗಿ ಮಾಡುತ್ತದೆ.

   

Related Articles

error: Content is protected !!