- ಕರ್ಮ ರಹಸ್ಯ
ನಾವು ಸತ್ಕರ್ಮಗಳನ್ನು ಮಾಡಿಯೂ ಫಲಾಪೇಕ್ಷೆ ಇಲ್ಲದೆ ಅವುಗಳನ್ನು ಮರೆಯಬೇಕೆಂದು ಹೇಳಿದರೆ ಅದೆಷ್ಟು ಕಷ್ಟದ ಕೆಲಸ? ಇನ್ನೊಬ್ಬರು ನಮ್ಮ ವಿರುದ್ಧ ಎಸಗುವ ದುಷ್ಕ್ರತ್ಯಗಳನ್ನು ಕ್ಷಮಾಗುಣದಿಂದ ಮರೆಯುವುದಾದರೂ ಸಾಧ್ಯ, ಆದರೆ ನಾವು ಮಾಡಿರುವ ಸತ್ಕರ್ಮಗಳನ್ನು ಮರೆಯುವುದು ಅದಕ್ಕಿಂತ ಕಷ್ಟ! ಹೀಗೆಂದು ಯಾರಿಗಾದರೂ ಅನ್ನಿಸಿದರೆ ಅದರಲ್ಲಿ ಅತಿಶಯವೇನೂ ಇಲ್ಲ. ಕಾರಣ ಮನುಷ್ಯ ಸ್ವಭಾವತಃ ಪ್ರಚಾರ ಪ್ರಿಯ. ಇತರರು ತನ್ನ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಬೇಕು, ಸ್ಮರಿಸಬೇಕು ಮತ್ತು ಕೊಂಡಾಡಬೇಕು ಎಂದು ಎಲ್ಲರೂ ಬಯಸುತ್ತಾರೆ ಮತ್ತು ಇತರರು ಹಾಗೆ ಮಾಡದಿದ್ದಾಗ ‘ಎಂತಹ ಕೃತಘ್ನ ಜನರಿವರು’ ಎಂದು ಹೀಗೆಳೆಯುತ್ತಾರೆ. ಇತರರ ದುಷ್ಕರ್ಮಗಳನ್ನು ಕ್ಷಮಿಸಿ ಮರೆತುಬಿಡುವುದು ಮತ್ತು ಫಲಾಪೇಕ್ಷಿತನಾಗದೇ ತಾನು ಮಾಡಿದ ಸತ್ಕರ್ಮಗಳನ್ನೂ ಮರೆತು ಬಿಡುವುದು ‘ಕರ್ಮ ರಹಸ್ಯ’ವನ್ನು ಅರಿತವನಿಗೆ ಮಾತ್ರ ಸಾಧ್ಯ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ‘ಯಾರು ಸತ್ಕರ್ಮದಲ್ಲಿ ಕೊಂಚ ಕೆಟ್ಟುದು ಇರುವುದನ್ನು ನೋಡುವನೋ ಆತನೇ ಕರ್ಮ ರಹಸ್ಯವನ್ನು ಅರಿತವನು’ ಎಂದು ಸ್ವಾಮಿ ವಿವೇಕಾನಂದರು ಹೇಳುವ ಮಾತಿನ ಸೂಕ್ಷ್ಮವನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕು. ಅದಕ್ಕಾಗಿ ನಮ್ಮನ್ನೇ ನಾವು ಒರೆಗಲ್ಲಿಗೆ ಹಚ್ಚಿನೋಡಬೇಕು. ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾಕೆಂದರೆ ನಾವು ಸ್ವಭಾವತಃ ಇತರರ ಕರ್ಮಗಳನ್ನು ಮಾತ್ರವೇ ವಿಮರ್ಶಿಸಿ ಟೀಕಿಸುವವರು. ನಮಗೆ ಮಾತ್ರ ಸ್ವಮಿಮರ್ಶೆ – ಟೀಕೆಗಳಿಂದ ವಿನಾಯಿತಿ ನೀಡುವವರು. ಅಷ್ಟೇ ಏಕೆ – ಇತರರ ಟೀಕೆ – ಟಿಪ್ಪಣಿಗಳನ್ನು ಸಹಿಸುವ ಮನೋಭಾವವೂ ನಮ್ಮಲ್ಲಿ ಇಲ್ಲ! ಎಲ್ಲ ಬಗೆಯ ಕರ್ಮಗಳಲ್ಲಿ ಫಲವೆನ್ನುವುದು ಎಷ್ಟು ನಿಶ್ಚಿತವೋ ಆ ಫಲವು ಒಳಿತು – ಕೆಡುಕುಗಳ ಮಿಶ್ರಣವಾಗಿರುವುದೂ ಅಷ್ಟೆ ನಿಶ್ಚಿತ. ಅದನ್ನು ತಿಳಿದುಕೊಳ್ಳುವುದರಲ್ಲೇ ನಮ್ಮ ಒಳಿತು ಅಡಗಿದೆ.