Home » ಸೇವಾ ಸಾಫಲ್ಯ
 

ಸೇವಾ ಸಾಫಲ್ಯ

by Kundapur Xpress
Spread the love
  1. ಸೇವಾ ಸಾಫಲ್ಯ

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ಆತ್ಮಶುದ್ಧಿ ಮಾಡಿಕೊಳ್ಳುವುದೇ ನಾವು ಇತರರಿಗೆ ಸಹಾಯ ಮಾಡುವುದರ ಮುಖ್ಯ ಫಲ. ಇದು ಹೇಗೆ ಎನ್ನುವುದನು ಯೋಚಿಸಬೇಕು. ಇತರರಿಗೆ ಸಹಾಯ ಮಾಡುವಲ್ಲಿ ನಿರತರಾಗುತ್ತಾ ನಮ್ಮನ್ನು ನಾವೇ ಮರೆಯಲು ಸಾಧ್ಯವಾದರೆ ಅದುವೇ ನಿಜವಾದ ಕರ್ಮಯೋಗ. ಇನ್ನೊಬ್ಬರಿಗೆ ಸಂತೋಷ, ಸಂತೃಪ್ತಿ ತಂದುಕೊಡುವ ಸಂತಸವೇ ನಿಜವಾದ ಸಂತಸ. ಆ ಸಂತಸದ ತುತ್ತತುದಿಯೇ ಶಾಂತಿ. ಪರಹಿತಕ್ಕಾಗಿ ನಾವು ಎಸಗುವ  ಕರ್ಮಗಳ ಮೂಲಕ ನಾವು ನಿಜಕ್ಕೂ ನಮ್ಮನ್ನು ಮರೆಯುವುದು ಸಾಧ್ಯ ಎನ್ನುತ್ತಾರೆ ವಿವೇಕಾನಂದರು. ದೇವರ ಭಕ್ತಿಯಲ್ಲಿ ಭಕ್ತನು ಹೇಗೆ ಪರವಶವಾಗುವನೋ ಅದೇ ಉತ್ತುಂಗ ಸ್ಥಿತಿಯನ್ನು ಸೇವಾನಿರತನಾದವನು ಕೂಡ ಅನುಭವಿಸುತ್ತಾನೆ  ಮಹಾತ್ಮಾ ಗಾಂಧೀಜಿ, ಜ್ಯೋತಿಬಾ ಪುಲೆ ಅವರಂತಹ ಸೇವಾ ಮಹಿಮರು ಈ ಮಾತನ್ನು ನಿಜಗೊಳಿಸಿದ್ದಾರೆ. ಫಲಾಪೇಕ್ಷೆ ಇಲ್ಲದೇ ಕರ್ಮದಲ್ಲಿ ತೊಡಗುವ ಮೂಲಕ ನಮ್ಮನ್ನು ನಾವು ಮರೆಯುವುದೇ ಈ ಜೀವನದಲ್ಲಿ ನಾವು ಕಲಿಯಬೇಕಾದ ಮುಖ್ಯ ಪಾಠ. ‘ನನಗೆ ಸುಖ ದೊರೆಯುವಂತೆ ನಾನು ಮಾಡುವೆನು’ ಎಂದು ಯಾರಾದರೂ ಭಾವಿಸಿದರೆ ಅದು ಮೂರ್ಖತನವೇ ಸರಿ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಇತರರಿಗೆ ಸುಖಕೊಡುವ ಸತ್ಕರ್ಮದಲ್ಲಿ ನಿರತರಾಗುವುದರಲ್ಲೇ ನಮ್ಮ ಸುಖ ಅಡಗಿದೆ ಎಂಬ ಸತ್ಯವನ್ನು ತಿಳಿದ ವಿನಾ ನಮಗೆ ಸುಖ ದೊರೆಯಲುಂಟೆ? ಸ್ವಾರ್ಥಪರತೆಯಲ್ಲಿ ಅಡಗಿರುವುದು ದುಃಖವಲ್ಲದೆ ಬೇರೇನೂ ಅಲ್ಲ! ಇತರರ ದುಃಖವನ್ನು ಹಂಚಿಕೊಂಡಾಗಲೇ ಸುಖದ ಸವಿ ಸಿಗಲು ಸಾಧ್ಯ. ಏಕೆಂದರೆ ನಮಗಿಂತ ಹೆಚ್ಚು ದುಃಖಿಗಳು ಈ ಪ್ರಪಂಚದಲ್ಲಿ ಇದ್ದಾರೆ ಎಂಬ ಅರಿವಿಗೆ ನಾವು ನಮ್ಮನ್ನು ತೆರೆದುಕೊಳ್ಳುತ್ತೇವೆ! ನಿಜ ನೋಡಹೋದರೆ ನಾವು ಸುಖ ಪಡುವುದು ನಮ್ಮ ಅರಿವಿನಿಂದ; ಉಳಿದವರನ್ನು ಸಂತಸ ಪಡುವಂತೆ ಮಾಡುವುದು ನಮ್ಮ ಸದ್ಗುಣದಿಂದ.

   

Related Articles

error: Content is protected !!