ನಮ್ಮ ಲೋಪದೋಷಗಳನ್ನು ತಿಳಿದುಕೊಳ್ಳದೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ನಾವು ಶಕ್ತಿವಂತರೆಂಬ ಭಾವನೆಯನ್ನು ಬೆಳೆಸಿಕೊಂಡಷ್ಟೂ ನಮ್ಮಲ್ಲಿ ದೌರ್ಬಲ್ಯ ಮತ್ತು ಟೊಳ್ಳುತನ ಹೆಚ್ಚುತ್ತಲೇ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ದೈಹಿಕ, ಆರ್ಥಿಕ ಶಕ್ತಿ ಸಾಮರ್ಥ್ಯದ ಬಗ್ಗೆ ನಾವು ಅತಿಯಾದ ಗರ್ವವನ್ನು ಹೊಂದಿರುವುದೇ ಆಗಿದೆ. ದೇಹ ಬಲ, ಧನ ಬಲದ ಭ್ರಮೆಗಳು ನಮ್ಮ ಮತ್ತು ದೇವರ ನಡುವೆ ಅಭೇದ್ಯವಾದ ಗೋಡೆಯನ್ನೇ ಕಟ್ಟುತ್ತವೆ. ನಮ್ಮ ದೌರ್ಬಲ್ಯಗಳ ಅರಿವೇ ನಮಗೆ ಉಂಟಾಗದೆ ಅತಿಯಾದ ಆತ್ಮವಿಶ್ವಾಸದಲ್ಲಿ ಬೀಗುತ್ತಿರುತ್ತೇವೆ. ಆನಂದಮಯ ಬದುಕಿಗೆ ಅತ್ಯವಶ್ಯವಾಗಿ ಬೇಕಿರುವುದು ನಮ್ಮ ಶಕ್ತಿ-ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಯಥಾರ್ಥ ಅರಿವು. ಕನಸಿನ ಗುಲಾಬಿಗಿಂತಲೂ ನಿಜದ ಮುಳ್ಳೇ ವಾಸಿ ಎಂಬ ಮಾತಿದೆ. ನಿಜದ ಮುಳ್ಳು ಎಷ್ಟು ಸಣ್ಣದಿದ್ದರೂ ಅದು ನಮ್ಮ ಪಾಲಿನ ಅಸ್ತ್ರವೇ ಆಗಿ ಪ್ರಯೋಜನಕ್ಕೆ ಬರಬಹುದು. ಈ ಯಥಾರ್ಥತೆಯ ಅರಿವಿನಲ್ಲೇ ಬಾಳಿನ ಸಾಫಲ್ಯವಿದೆ. ಆದರೆ ಈ ಯಥಾರ್ಥತೆಯನ್ನು ಅರಿಯುವ ವಿವೇಕ ಎಲ್ಲಿಂದ ಬರಬೇಕು? ಅರಿಷಡ್ವರ್ಗಗಳ ಹಿಡಿತದಿಂದ ನಾವು ಮುಕ್ತಿಯನ್ನು ಸಾಧಿಸುವ ಯತ್ನದಲ್ಲೇ ಆ ವಿವೇಕ ಅಡಗಿದೆ. ಸ್ವಾಮೀ ವಿವೇಕಾನಂದರು ಹೇಳುತ್ತಾರೆ: ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ ಆಗಿದ್ದಾನೆ. ನಮ್ಮೆಲ್ಲ ದೇಹ ಬಲ, ಧನ ಬಲವ ಮೂಲವು ಸ್ವಾರ್ಥ, ಲೋಭ, ಮೋಹ, ಮದ, ಮತ್ಸರಗಳಲ್ಲಿ ಹುದುಗಿಕೊಂಡಿದೆ. ಅದನ್ನು ಹೊರಹಾಕದೆ ನಮ್ಮೊಳಗಿನ ದೇವರನ್ನು ನಾವು ಕಾಣಲಾರೆವು. ತೇನ ವಿನಾ ತೃಣ ಮಪಿ ಚಲತಿ ಎನ್ನುವ ಮಾತಿನಂತೆ ದೈವಬಲವೇ ನಮ್ಮ ನಿಜವಾದ ಬಲ. ದೇವರ ಅನುಗ್ರಹವಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು. ಹಾಗಿರುವಾಗ ದೇಹಬಲ, ಧನಬಲದ ಬಗ್ಗೆ ನಾವು ಗರ್ವಪಡುವುದರಲ್ಲಿ ಏನಾದರೂ ಅರ್ಥವಿದೆಯೇ?