ಭಕ್ತಿಯೋಗದ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರು ದೇವರ ಮೇಲಿನ ನಿಷ್ಕಳಂಕ ಭಕ್ತಿಯ ಸ್ವರೂಪ ಹೇಗಿರಬೇಕು ಎಂಬುದನ್ನು ಹೀಗೆ ವಿವರಿಸುತ್ತಾರೆ. ‘ಅವಿವೇಕಿಗಳಿಗೆ ಕ್ಷಣಭಂಗುರವಾದ ಇಂದ್ರಿಯ ವಿಷಯಗಳ ಮೇಲೆ ಎಂತಹ ಅಚಲವಾದ ಪ್ರೀತಿ ಇರುವುದೋ ಅಂತಹ ಪ್ರಬಲವಾದ ಪ್ರೀತಿಯು ನಿನ್ನನ್ನು (ದೇವರನ್ನು) ಸ್ಮರಿಸುವ ನನ್ನ ಹೃದಯದಿಂದ ಎಂದಿಗೂ ದೂರವಾಗದಿರಲಿ’. ದೇವರ ಮೇಲೆ ನಮಗೆ ಎಷ್ಟೊಂದು ಅಚಲವಾದ ಭಕ್ತಿ ಇರಬೇಕೆಂಬುದನ್ನು ನಾವಿಲ್ಲಿ ತಿಳಿಯಬೇಕು. ನಮ್ಮನ್ನು ನಾವೊಮ್ಮೆ ನಿಷ್ಠುತೆಯಿಂದ ಅವಲೋಕಿಸಿದರೆ ನಮ್ಮಲ್ಲಿನ ಆಸಕ್ತಿಗಳು ತದ್ವಿರುದ್ಧವಾಗಿವೆ. ಕ್ಷಣ ಭಂಗುರವಾದ ಇಂದ್ರಿಯ ವಿಷಯಗಳ ಮೇಲೆ ನಮಗೆ ಅಚಲವಾದ ಪ್ರೀತಿ ಇದೆ. ಇಂದ್ರೀಯ ಸುಖಗಳ ಮೇಲೆಯೇ ನಮ್ಮ ಬದುಕೆಂಬ ಸೌಧವನ್ನು ನಾವು ನಿಲ್ಲಿಸಿರುತ್ತೇವೆ. ಆ ಸೌಧವು ಸಣ್ಣಸಣ್ಣ ಪೆಟ್ಟನ್ನು ಕೂಡ ತಾಳಿಕೊಳ್ಳಲಾರದೆಂಬ ಅರಿವು ಕೂಡ ನಮ್ಮಲ್ಲಿ ಇಲ್ಲವಾಗಿದೆ. ಪುಟ್ಟ ಮಕ್ಕಳು ತಮ್ಮ ಆಟದ ಇಸ್ಪೀಟ್ ಎಲೆಗಳನ್ನು ಜೋಡಿಸುತ್ತಾ ಅಂತಸ್ತುಗಳನ್ನು ರಚಿಸಿ ಗೋಪುರ ಕಟ್ಟಿ ‘ಆಹಾ, ಎಷ್ಟೊಂದು ಸುಂದರ ಈ ನನ್ನ ಅರಮನೆ’ ಎಂದು ಸಂತಸಪಡುವಷ್ಟರಲ್ಲೇ ಸಣ್ಣಗೆ ಬೀಸಿ ಬರುವ ಗಾಳಿಗೆ ಸಿಕ್ಕಿ ಪಟಪಟನೆ ನೆಲಕ್ಕುರುಳಿ ಬೀಳುವ ಆ ‘ಇಸ್ಪೀಟ್ ಅರಮನೆ’ಯ ಹಾಗೆಯೇ ನಮ್ಮ ಬದುಕೆಂಬ ಸೌಧವಿದೆ! ನಮ್ಮ ಐಹಿಕ ಸುಖ-ಸಂಪತ್ತನ್ನು ಹೆಚ್ಚಿಸಬೇಕೆಂಬ ಬೇಡಿಕೆಗಳನ್ನು ಒಳಗೊಂಡ ಪ್ರಾರ್ಥನೆಗಳ ಮೂಲಕ ನಾವು ಜನನ-ಮರಣಗಳ ಚಕ್ರದಲ್ಲಿ ನಮ್ಮನ್ನು ಮತ್ತಷ್ಟು ಗಟ್ಟಿಯಾಗಿ ಬಂಧಿಸುವುದರ ಹೊರತು ಬೇರೇನನ್ನೂ ಮಾಡಲಾರೆವು.