ಕುಂದಾಪುರ: ಶ್ರೀ ಶಾರದಾ ಕಾಲೇಜು ಬಸ್ರೂರು ಅಲ್ಲಿ ಐಕ್ಯೂಎಸಿ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಮತ್ತು ರಾಂಡ್ಸ್ಟಾಡ್ ನೇಮಕಾತಿ ಕಂಪನಿಯ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಗೋಪಾಲ ಶೆಟ್ಟಿ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಕೂರುವ ಬದಲು ಸಿಗುವ ಕೆಲಸದಲ್ಲಿ ಉತ್ತಮ ಅನುಭವ ಹಾಗೂ ತರಬೇತಿ ಪಡೆದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಹಾಗಾಗಿ ಸದುಪಯೋಗವನ್ನು ಯುವ ಜನತೆ ಪಡೆದುಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ರಾಂಡ್ಸ್ಟಾಡ್ನ ಡೆಲಿವರಿ ಮೆನೆಜರ್ ಸೌತ್ ಇದರ ಕೃಷ್ಣಮೂರ್ತಿ ಎನ್. ಮಾತನಾಡಿ ಉದ್ಯೋಗಮೇಳ ಆಯೋಜಿಸಲು ಅವಕಾಶ ಮಾಡಿಕೊಟ್ಟ ಕಾಲೇಜು ಮತ್ತು ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ರಾಂಡ್ಸ್ಟಾಡ್ನ ನೇಮಕಾತಿ ವಿಭಾಗದ ರಾಜಣ್ಣ ವಿ. ಮತ್ತು ಅನಿಲ್ ಕುಮಾರ್ ಉಪಸ್ಥಿತರಿದ್ದರು. ಐಕ್ಯೂಎಸಿ ಘಟಕದ ಸಂಯೋಜಕರಾದ ಪ್ರೊ. ಪುರುಷೋತ್ತಮ ಬಲ್ಯಾಯ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ವೃತ್ತಿ ಮಾರ್ಗದರ್ಶನ ಘಟಕದ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ಆಯೋಜಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಸಂದೀಪ ಕೆ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವೈಶಾಲಿ ಧನ್ಯವಾದ ಸಲ್ಲಿಸಿದರು.