ಕಾಶ್ಮೀರ : ದೇಶದ ಗಡಿಭಾಗದ ಕಾಶ್ಮೀರದ ತಿತ್ವಾಲ್ನಲ್ಲಿ ಶ್ರೀ ಶಾರದಾಂಬೆ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯವನ್ನು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಗಳು ಸೋಮವಾರ ನೆರವೇರಿಸಿದರು.
ಶಾರದಾಂಬೆ ಪ್ರತಿಷ್ಠೆ ಕುಂಭಾಭಿಷೇಕದ ಅಂಗವಾಗಿ ಭಾನುವಾರ ಮತ್ತು ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪಂಚಲೋಹದ ಶಾರದೆಯ ವಿಗ್ರಹಕ್ಕೆ ಕಲ್ಪೋಕ್ತ ಪೂಜೆ, ಪಂಚಾಮೃತ ಅಭಿಷೇಕ, ಪುರುಷ ಸೂಕ್ತ ಹಾಗೂ ಶ್ರೀ ಸೂಕ್ತ ಸಹಿತ ರುದ್ರಾಭಿಷೇಕ ನಡೆಯಿತು. ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ನಡೆಯಿತು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಶಾರದಾ ಪೀಠದ ಆರಾಧ್ಯ ದೈವ ಶ್ರೀಚಕ್ರ ಯಂತ್ರ ಸ್ಥಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು ಶ್ರೀ ಮಠದ ಪುರೋಹಿತರಾದ ಡಾ. ಶಿವಕುಮಾರ ಶರ್ಮಾ, ತಂತ್ರಿ ಸೀತಾರಾಮ ಶರ್ಮ ನೇತೃತ್ವದ ತಂಡ ಧಾರ್ಮಿಕ ಕಾರ್ಯ ನಡೆಸಿಕೊಟ್ಟರು. ಶ್ರೀಗಳು ದೇವಸ್ಥಾನದ ಸಮುಚ್ಚಯದಲ್ಲಿ ಪಾರಿಜಾತ ಹಾಗೂ ಬಿಲ್ವಪತ್ರೆ ಗಿಡವನ್ನು ನೆಟ್ಟರು. ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರಿ ಶಂಕರ್, ಕಾಶ್ಮೀರಿ ಪಂಡಿತರು ಉಪಸ್ಥಿತರಿದ್ದರು. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.