ನಾವೆಲ್ಲರೂ ಜೀವನವನ್ನು ತುಂಬ ಪ್ರೀತಿಸುತ್ತೇವೆ. ಚೆನ್ನಾಗಿ ಬದುಕಬೇಕು ಎಂದು ಹಾರೈಸುತ್ತೇವೆ. ನಿತ್ಯವೂ ಸುಖ – ಸಂತೋಷ ನಮ್ಮ ಬದುಕಿನಲ್ಲಿ ತುಂಬಿರಬೇಕು ಎಂದು ಆಶಿಸುತ್ತೇವೆ. ನಮ್ಮ ಭವಿಷ್ಯವು ಉಜ್ವಲವಾಗಿರಬೇಕೆಂಬ ಮಹದಾಸೆ ನಮ್ಮದು. ಅವೆಲ್ಲ ಸರಿ, ಆದರೆ ಜೀವನವನ್ನು ಕೇವಲ ಜೀವನಕ್ಕಾಗಿಯೇ ಪ್ರೀತಿಸುವುದು ಹೌದಾಗಿದ್ದರೆ ಅದರ ಹಿಂದಿರುವುದು ಸ್ವಾರ್ಥಪರತೆ ಅಲ್ಲದೇ ಬೇರೇನು? ಐಹಿಕ ಸುಖ – ಸಂತೋಷಗಳನ್ನು ಅನುಭವಿಸುವ ಉದ್ದೇಶ ಹೊಂದಿದಾಗ ಜೀವನವೇ ನಮಗೆ ಬಾಳಿನ ಗುರಿಯಾಗಿಬಿಡುತ್ತದೆ. ಪರಿಣಾಮವಾಗಿ ಇನ್ನಷ್ಟು ತೀವ್ರವಾಗಿ ಇಂದ್ರಿಯ ಸುಖಗಳನ್ನು ಅನುಭವಿಸಬೇಕೆಂಬ ವಾಂಛೆ ನಮ್ಮಲ್ಲಿ ಬೆಳೆಯುತ್ತದೆ. ಇದು ಎಷ್ಟು ತೀವ್ರವಾಗಿರುವುದೆಂದರೆ ನಮ್ಮ ತೀರ ಹತ್ತಿರದ ಬಂಧುಗಳು ಕಾಲವಶರಾದಾಗಲೂ ‘ಸಾವು ನನ್ನ ಬಳಿ ಸುಳಿಯದು; ನಾನು ಸಾಯುವವನೇ ಅಲ್ಲ, ಇನ್ನೂ ಬಹುಕಾಲ ಬಾಳಿ ಬದುಕುವವನು’ ಎಂಬ ಅಭಿಪ್ರಾಯವನ್ನೇ ಗಟ್ಟಿಮಾಡಿಕೊಳ್ಳುತ್ತೇವೆ. ಬಂಧುಗಳು ಗತಿಸಿದಾಗ ನಮ್ಮನ್ನು ಕ್ಷಣಕಾಲ ಕಾಡುವುದು ಶ್ಮಶಾನ ವೈರಾಗ್ಯವಲ್ಲದೆ ಬೇರೇನೂ ಅಲ್ಲ! ಬದುಕಿರುವ ಸಲುವಾಗಿಯೇ ಬದುಕನ್ನು ಪ್ರೀತಿಸುವುದೆಂದರೆ ಇಂದ್ರಿಯ ಸುಖಭೋಗಗಳೇ ಬದುಕಿನ ಪರಮೋದ್ದೇಶವಾಗಿರುವುದು ಎಂದರ್ಥ. ನಮ್ಮ ಭವಿಷ್ಯವು ಚೆನ್ನಾಗಿರಲೆಂಬ ಆಶಯದಲ್ಲಿ ಕೂಡ ಇರುವ ಆಸೆ ಯಾವುದು? ‘ಇವತ್ತು ನಾವು ಅನುಭವಿಸುತ್ತಿರುಬ ಐಹಿಕ ಸುಖ – ಸಂತೋಷಗಳು ಮುಂದೆಯೂ ಹೀಗೆಯೇ ನಮ್ಮ ಪಾಲಿಗಿರಲಿ’ ಎಂದಲ್ಲವೆ ಈ ಬದುಕಾಗಲೀ ಪ್ರಪಂಚವಾಗಲೀ ನಮ್ಮ ಬಾಳಿನ ಗುರಿ ಅಲ್ಲ; ಗುರಿಯನ್ನು ಸಾಧಿಸಲು ಇರುವ ಮಾಧ್ಯಮಗಳು ಎನ್ನುವುದನ್ನು ನಾವು ಅರಿಯುವುದು ಮುಖ್ಯ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಹಾಗಿರುವಾಗ ನಮ್ಮ ಬಾಳಿನ ಆ ಮಹೋನ್ನತ ಗುರಿ ಯಾವುದು? ಅದುವೇ ಮೋಕ್ಷ. ಪ್ರಾಪಂಚಿಕ ಸುಖಭೋಗಗಳಲ್ಲಿ ನಿರತರಾಗಿರುವವರಿಗೆ ಮರಣದ ಭಯ ಇರುವುದೇ ವಿನಾ ಮೋಕ್ಷದ ಹಂಬಲ ಇರಲು ಸಾಧ್ಯವಿಲ್ಲ.