- ಕಾಮನೆ ಎಂಬ ಶತ್ರು
ಸಂಪತ್ತು ಅಂತಸ್ತು, ಕೀರ್ತಿಯನ್ನು ಅರಸುತ್ತಾ ಅವುಗಳಿಗಾಗಿಯೇ ಹಂಬಲಿಸುತ್ತಾ ಹೆಂಡತಿ, ಮಕ್ಕಳು, ಬಂಧುಬಳಗದ ಸುಖ – ಸಂತೋಷಕ್ಕಾಗಿಯೇ ಸಾಗುವ ನಮ್ಮ ಬದುಕು ಸಹಜವಾಗಿಯೇ ಸ್ವಾರ್ಥಪರವಾಗಿದೆ. ಹಾಗಾಗಿ ಅದು ದುಃಖದಾಯಕವೂ ಆಗಿದೆ. ಹೀಗಿರುವಾಗ ಆತ್ಮೋನ್ನತಿ ಮಾರ್ಗ ನಮಗೆ ಗೋಚರಿಸುವುದಾದರೂ ಹೇಗೆ? ನಮ್ಮ ಪ್ರಾಪಂಚಿಕ ಬದುಕೇ ನಮಗೆ ನಿತ್ಯ ಸತ್ಯವಾಗಿ ಕಂಡುಬರುವಾಗ ಐಹಿಕ ಸುಖ – ಸಂತೋಷಗಳನ್ನು ಉಪೇಕ್ಷಿಸುವುದು ಕೂಡ ನಮಗೆ ಅಸಾಧ್ಯ. ಅವುಗಳನ್ನು ಅನುಭವಿಸದೇ ಇರುವುದೂ ಅಸಾಧ್ಯ. ಶಾಸ್ತ್ರ, ಧರ್ಮ – ಅಧರ್ಮ ಏನೆಂಬುದು ಚೆನ್ನಾಗಿ ತಿಳಿದಿದ್ದರೂ ಯಾವುದೋ ಬಲವಂತಕ್ಕೆ ಒಳಪಟ್ಟವರಂತೆ ಸಂದರ್ಭಾನುಸಾರ ನಾವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಮೆರೆಯುತ್ತೇವೆ, ಏಕೆ? ನಮ್ಮೊಳಗಿನ ಸುಜ್ಞಾನವನ್ನು ಧಿಕ್ಕರಿಸಿಯೂ ನಾವೇಕೆ ಅನಾಚಾರಗಳಲ್ಲಿ, ಅನಪೇಕ್ಷಿತ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ? ನಮ್ಮನ್ನು ಅಂತಹ ಕೆಲಸಕ್ಕೆ ಪ್ರೇರಿಸುವ ಶಕ್ತಿಯಾದರೂ ಯಾವುದು? ನಮ್ಮೆಲ್ಲರನ್ನೂ ಪರಮಾತ್ಮನು ಜೀವಾತ್ಮನಾಗಿ ನೆಲೆಸಿರುವುದೇ ಆಗಿದ್ದರೆ ನಾವೇಕೆ ಪಾಪಕೃತ್ಯಗಳಲ್ಲಿ ತೊಡಗುತ್ತೇವೆ? ಈ ಬಗೆಯ ಪ್ರಶ್ನೆಗಳು ಇಂದು ನಮ್ಮನ್ನು ಮಾತ್ರವಲ್ಲ, ಕುರುಕ್ಷೇತ್ರದಲ್ಲಿ ಯುದ್ಧಸನ್ನದ್ಧನಾಗಿ ನಿಂತಿದ್ದ ಅರ್ಜುನನನ್ನೂ ಅಂದು ಕಾಡಿದ್ದವು. ಅದಕ್ಕೆ ಶ್ರೀಕೃಷ್ಣನು ಕೊಟ್ಟ ಉತ್ತರ ಇದು: ‘ಮನುಷ್ಯರಲ್ಲಿ ತುಂಬಿಕೊಂಡಿರುವ ಅಗಣಿತ ಕಾಮನೆಗಳೇ ಆತನ ಪರಮಶತ್ರು. ಆ ಕಾಮನೆಗಳೇ ಆತ್ಮನಲ್ಲಿರುವ ಆತ್ಮಜ್ಞಾನವನ್ನು ಸಂಪೂರ್ಣವಾಗಿ ಮುಚ್ಚಿಹಾಕಿ ಆತನನ್ನು ಪಾಪಕೃತ್ಯಕ್ಕೆ ತೊಡಗುವಂತೆ ಪ್ರಚೋದಿಸುತ್ತವೆ. ಆದುದರಿಂದ ಬಯಕೆ ಎಂಬ ನಿನ್ನ ಪರಮ ಶತ್ರುವನ್ನು ನೀನು ಮೊದಲು ಜಯಿಸಬೇಕು’. ಸ್ವಾರ್ಥಪರ ಜೀವನವನ್ನು ನಡೆಸುವಷ್ಟು ಕಾಲವೂ ನಾವು ಮೃಗೀಯವಾಗಿಯೇ ಉಳಿಯುವ ದುರಂತಕ್ಕೆ ಒಳಗಾಗುತ್ತದೆ ಎಂಬುದನ್ನು ನಾವು ತಿಳಿಯುವುದು ಅಗತ್ಯ.