Home » ಆತ್ಮಜ್ಞಾನದ ಅವಜ್ಞೆ
 

ಆತ್ಮಜ್ಞಾನದ ಅವಜ್ಞೆ

by Kundapur Xpress
Spread the love
  1. ಆತ್ಮಜ್ಞಾನದ ಅವಜ್ಞೆ

ಇಂಗ್ಲೀಷಿನಲ್ಲಿ ಒಂದು ಮಾತಿದೆ: ಇಗ್ನೋರೆನ್ಸ್ ಈಸ್ ಬ್ಲಿಸ್. ಎಂದರೆ ಅಜ್ಞಾನವೇ ಪರಮಾನಂದ. ಆಧ್ಯಾತ್ಮಿಕ ದೃಷ್ಟಿಯಿಂದ ಅಜ್ಞಾನವನ್ನು ನಾವು ಆತ್ಮಜ್ಞಾನದ ಅವಜ್ಞೆ ಎಂದು ತಿಳಿಯುವುದು ಮುಖ್ಯ. ಆತ್ಮಜ್ಞಾನದ ಅವಜ್ಞೆ ಇರುವಲ್ಲಿ ದೇಹವೆ ಪರಮಪ್ರಧಾನವಾಗಿ ಆರಾಧಿಸಲ್ಪಡುತ್ತದೆ. ಇಂದ್ರಿಯಗಳ ಸುಖಸಂತೋಷವೇ ಅಲ್ಲಿ ಮುಖ್ಯವಾಗುತ್ತದೆ. ಸುಖಸಂತೋಷದ ಪ್ರಾಪ್ತಿಗಾಗಿ ಮನುಷ್ಯ ಮೃಗವಾಗಿ ವರ್ತಿಸಲು ಮುಂದಾಗುತ್ತಾನೆ. ತಿಂದಷ್ಟೂ ತೃಪ್ತಿಯಿಲ್ಲದಿರುವುದು, ಭೋಗಿಸಿದಷ್ಟೂ ಮತ್ತೂ ಬೇಕೆನಿಸುವುದು, ನಿದ್ರಿಸಿದಷ್ಟೂ ಮತ್ತು ನಿದ್ರಿಸಬೇಕೆನಿಸುವುದು. ಹೀಗೆ ದೈಹಿಕ ಕಾಮನೆಗಳಿಗೆ ಕೊನೆಯೇ ಇರುವುದಿಲ್ಲ. ಪರಿಣಾಮವಾಗಿ ಬದುಕು ಸದಾ ಅತೃಪ್ತ. ನಿತ್ಯವೂ ದುಃಖಕರ. ತೃಪ್ತಿಪಡಿಸಿದಷ್ಟೂ ರಕ್ತ ಬೀಜಾಸುರನಂತೆ ಮತ್ತೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ್ಮ ತಳೆಯುವ ಹೊಸ ಹೊಸ ಕಾಮನೆಗಳಿಂದಾಗಿ ಜೀವನ ಸದಾ ಉದ್ವಿಗ್ನ. ಹಾಗಾಗಿಯೇ ಸಿಟ್ಟು ಕ್ಷಣಮಾತ್ರದಲ್ಲಿ ಪ್ರತ್ಯಕ್ಷವಾಗುವ ರಕ್ಕಸ. ಬಂಧು ಮಿತ್ರರೊಡನೆ ವಿನಾಕಾರಣ ಜಗಳ, ವೈಮನಸ್ಯ. ಸದಾ ಕುದಿಯುತ್ತಲೇ ಇರುವ ರಕ್ತದಿಂದಾಗಿ ಮೈಮನಗಳ ಆರೋಗ್ಯ ಅತ್ಯಂತ ಸೂಕ್ಷ್ಮ. ರೋಗ ರುಜಿನಗಳಿಗೆ ಬೇರೆ ಆಹ್ವಾನವೇ ಬೇಕಾಗಿಲ್ಲದ ಪರಿಸ್ಥಿತಿ. ಇದು ಇಂದ್ರಿಯ ವಿಷಯಗಳಿಗೆ ಬಲಿಪಶುಗಳಾಗಿ ಬದುಕುವ ನಮ್ಮ ಜೀವನದ ಪರಿ. ಭೋಗವೇ ಪ್ರಧಾನವಾದಾಗ, ದೇಹವೇ ಆರಾಧ್ಯದೈವವಾದಾಗ ಕಾಮ, ಕ್ರೋಧಾಧಿಗಳೇ ಹಿತಶತ್ರುಗಳಾಗುವುವು. ಬಯಕೆ ಎಂಬ ಅತೃಪ್ತ ರಕ್ಕಸನನ್ನು ತೃಪ್ತಿಪಡಿಸುವುದು ಸುಲಭವೇ? ಅಂತೆಯೇ ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ: ರಜೋಗುಣದಿಂದ ಉತ್ಪತ್ತಿಯಾದ ಕಾಮವೇ ಕ್ರೋಧವಾಗಿ ಕಂಡುಬರುವುದು. ಇದು ಮಹಾ ಅಗ್ನಿಯಂತೆ ತೃಪ್ತಿಯನ್ನೇ ಕಾಣದಿರುವುದು. ಆದುದರಿಂದಲೇ ಇದು ಮನುಷ್ಯನ ಮಹಾವೈರಿ.

   

Related Articles

error: Content is protected !!