Home » ಆತ್ಮಜ್ಞಾನದ ಬೆಳಕು
 

ಆತ್ಮಜ್ಞಾನದ ಬೆಳಕು

by Kundapur Xpress
Spread the love

ನಮ್ಮನ್ನು ನಾವು ಅರಿಯುವ ಪ್ರಕ್ರಿಯೆ ಸಾಧ್ಯವಾಗುವುದೇ ಆತ್ಮಜ್ಞಾನದ ಬೆಳಕಿನನಲ್ಲಿ. ಆ ಬೆಳಕು ಅಷ್ಟು ಸುಲಭವಾಗಿ ನಮಗೆ ಗೋಚರವಾದೀತೇ? ದೇಹದಿಂದ ಬಂಧಿತನಾಗಿರುವ ಆತ್ಮನನ್ನು ಕಾಣಲು ಕಾಮವೆಂಬ ಅಂಧಕಾರದಿಂದ ತುಂಬಿಹೋಗಿರುವ ಕಾರಾಗೃಹದ ಅದೆಷ್ಟು ಬಾಗಿಲುಗಳನ್ನು ತೆರೆದು ಒಳಗೆ ಸಾಗಬೇಕೋ? ನಾವೆಂದರೆ ದೇಹವಲ್ಲ, ಆತ್ಮನ ಅರಿವನ್ನು ಗಳಿಸಬೇಕಿದ್ದರೆ ದೇಹದ ಪರಿಮಿತಿಗಳನ್ನು ನಾವು ಎಲ್ಲಕ್ಕಿಂತ ಮೊದಲು ತಿಳಿಯಬೇಕಾಗುತ್ತದೆ. ಹೆಂಡತಿ, ಮಕ್ಕಳು, ಬಂಧು ಮಿತ್ರರು ಹಾಗೂ ಇಡಿಯ ಸಮಾಜ ನಮ್ಮನ್ನು ಗುರುತಿಸುವುದು ದೇಹದ ಅಸ್ತಿತ್ವದಿಂದ ಎಂಬುದು ನಿಜವೇ ಆದರೂ ಗೌರವ, ಪುರಸ್ಕಾರ, ಮನ್ನಣೆ ಇತ್ಯಾದಿಗಳು ಪ್ರಾಪ್ತವಾಗುವುದು ನಮ್ಮ ಸತ್ಕರ್ಮಗಳಿಂದಲೇ ವಿನಾ ಕೇವಲ ದೇಹದ ಅಸ್ತಿತ್ವದಿಂದ ಅಲ್ಲ ಎನ್ನುವುದು ಸರಿಯಷ್ಟೇ? ಹಾಗಾಗಿರುವಾಗ ನಾವು ಕೈಗೊಳ್ಳಬೇಕಾದ ಸತ್ಕರ್ಮಗಳಿಗೆ ಪ್ರೇರಣೆ, ಧೀಃಶಕ್ತಿ ನಮಗೆ ಎಲ್ಲಿಂದ ಬರಬೇಕು? ಅದು ಆತ್ಮಬಲದಿಂದಲೇ ಬರಬೇಕು. ಅಗ ಮಾತ್ರವೇ ದೇಹಶಕ್ತಿಗೆ ಸ್ಫೂರ್ತಿ, ಮಾರ್ಗದರ್ಶನ ಸಿಗುವುದು. ದೇಹವೊಂದು ಸಾಧನವೇ ವಿನಾ ಸ್ವತಃ ನಿಯಾಮಕನಲ್ಲ ಎನ್ನುವ ಅರಿವು ಆತ್ಮಜಾಗೃತಿಯಿಂದಲೇ ಬರಬೇಕು. ಪಂಚೇಂದ್ರಿಯಗಳನ್ನು ಮೀರಿದ ಅರಿವು ಅಗತ್ಯ. ಆ ಅರಿವನ್ನು ಪಡೆಯಲು ಇಂದ್ರಿಯ ನಿಗ್ರಹವೆಂಬ ತಪಸ್ಸು ಮುಖ್ಯ. ಪ್ರಕೃತಿಯ ಮಾಯೆಯಲ್ಲಿ ಪಂಚೇಂದ್ರಿಯಗಳೇ ನಮ್ಮನ್ನು ಆಳುವಾಗ ಆತ್ಮ ಸಾಕ್ಷಾತ್ಕಾರವು ಸುಲಭದ ವಿಷಯವಲ್ಲ. ರಕ್ತಬೀಜಾಸುರನಾಗಿ ನಮ್ಮಲ್ಲಿ ಮನೆ ಮಾಡಿಕೊಂಡಿರುವ ಕಾಮನೆಗಳೆಂಬ ಶತ್ರುವನ್ನು ಜಯಿಸದೆ ಆತ್ಮಜ್ಞಾನ ಪಡೆಯುವುದು ಸಾಧ್ಯವಿಲ್ಲ. ಆತ್ಮಜ್ಞಾನದ ಬೆಳಕಿಲ್ಲದಿದ್ದರೆ ಆತ್ಮೋನ್ನತಿ ಸಾಧನೆಯ ಪಥ ತೆರೆದುಕೊಳ್ಳುವುದಿಲ್ಲ.

   

Related Articles

error: Content is protected !!