ಸಾಮಾನ್ಯರಲ್ಲಿ ಸಾಮಾನ್ಯರಾದ ನಮಗೆ ನಮ್ಮೊಳಗಿನ ಆತ್ಮನ ಅಸ್ತಿತ್ವವನ್ನು ಕಾಣುವುದು ಮಹಾಕಷ್ಟದ ಕೆಲಸ. ಮಾಯೆಯ ಪ್ರಭಾವದಿಂದ ನಾವು ವಿಸ್ಮಂತಿಗೆ ಗುರಿಯಾಗಿರುವುದೇ ಇದಕ್ಕೆ ಕಾರಣ. ವರಾಹಾವತಾರವೆತ್ತಿ ಹಿರಣ್ಯಾಕ್ಷನನ್ನು ಸಂಹರಿಸಿದ ವಿಷ್ಣು ಆ ಬಳಿಕ ತನ್ನ ದೇವಸ್ವರೂಪದ ವಿಸ್ಮಂತಿಗೆ ಗುರಿಯಾದ ವಿಚಾರವನ್ನು ಶ್ರೀ ರಾಮಕೃಷ್ಣ ಪರಮಹಂಸರು ನಮಗೆ ತಿಳಿಸುತ್ತಾರೆ. ಹಿರಣ್ಯಾಕ್ಷನನ್ನು ಸಂಹರಿಸಿದ ಬಳಿಕ ತನ್ನ ವರಾಹಾವತಾರವನ್ನು ಕೊನೆಗೊಳಿಸುವುದು ವಿಷ್ಣುವಿಗೆ ಸಾಧ್ಯವಾಗಲಿಲ್ಲ. ಪ್ರಕೃತಿಯ ಗಾಢವಾದ ಮಾಯೆಯ ಪರಿಣಾಮವದು! ವರಾಹ ತನ್ನ ನಿಜಸ್ವರೂಪದ ವಿಸ್ಮಂತಿಯಿಂದ ಭೂಲೋಕದಲ್ಲಿ ತನ್ನ ಮರಿಗಳಿಗೆ ‘ಆನಂದ’ದಿಂದ ಹಾಲೂಣಿಸಿ ದಿನ ಕಳೆಯುತ್ತಿತ್ತು. ವಿಷ್ಣು ವರಾಹ ದೇಹವನ್ನು ತ್ಯಜಿಸಬೇಕೆಂದು ಮಾಡಿಕೊಂಡ ಪ್ರಾರ್ಥನೆಗಳೆಲ್ಲ ವಿಫಲವಾದಾಗ ದೇವತೆಗಳೆಲ್ಲ ಶಿವನ ಬಳಿಗೆ ಹೋಗಿ ಪ್ರಾರ್ಥಿಸಿದರು. ಶಿವನು ವರಾಹನ ಮುಂದೆ ಪ್ರತ್ಯಕ್ಷನಾಗಿ ‘ಹೀಗೇಕೆ ಇನ್ನೂ ಇಲ್ಲಿಯೇ ಇರುವೆ; ನೀನು ಸ್ವತಃ ದೇವನೆಂಬುದನ್ನು ಮರೆತೆಯಾ?’ ಎಂದು ಕೇಳಿದ್ದಕ್ಕೆ, ವರಾಹ ‘ಅಯ್ಯೋ, ನಾನಿಲ್ಲಿ ಹಾಯಾಗಿ ಆನಂದದಿಂದ ಜೀವಿಸುತ್ತಿರುವೆ. ನನಗೆ ಇದುವೇ ಸ್ವರ್ಗ; ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಬಾರದೆ?’ ಎಂದು ಉತ್ತರಿಸುವನು. ವರಾಹನಿಗೆ ಉಂಟಾದ ವಿಸ್ಮಂತಿಯನ್ನು ಕಂಡು ಕ್ರೋಧಗೊಂಡ ಶಿವ ಒಡನೆಯೇ ತನ್ನ ತ್ರಿಶೂಲದಿಂದ ವರಾಹನ ಶರೀರವನ್ನು ನಾಶಮಾಡುವನು. ದೇಹವು ನಾಶಗೊಂಡ ಕೂಡಲೇ ಪ್ರಕೃತಿಯ ಮಾಯೆಯಿಂದ ಉಂಟಾದ ವಿಸ್ಮಂತಿಯನ್ನು ಕಳಚಿಕೊಂಡ ವಿಷ್ಣು ತನ್ನ ನಿಜರೂಪವನ್ನು ತಳೆದು ದೇವಲೋಕವನ್ನು ಸೇರುವನು. ಪ್ರಕೃತಿಯ ಮಾಯೆಯಿಂದ ವಿಸ್ಮಂತಿಗೆ ಒಳಗಾಗಿರು ನಾವು ಕೂಡ ನಮ್ಮ ನಿಜಸ್ವರೂಪವನ್ನು ಅರಿಯಲು ದೇಹದ ಪರಿಧಿಯನ್ನು ದಾಟಿ ಹೋಗುವುದು ಅನಿವಾರ್ಯ ಎಂಬ ಸತ್ಯವನ್ನು ಪರಮಹಂಸರು ತಿಳಿಸುತ್ತಾರೆ.
ವಿಸ್ಮಂತಿಯ ಶಾಪ
98
previous post