ಆತ್ಮ ಸಾಕ್ಷಾತ್ಕಾರ ಎನ್ನುವುದು ಬಲು ದೊಡ್ಡ ತಪಸ್ಸೆನ್ನುವುದರಲ್ಲಿ ಎರಡು ಮಾತಿಲ್ಲ. ಆ ತಪಸ್ಸನ್ನು ಸಾಧಿಸಲು ಮುಖ್ಯವಾಗಿ ಬೇಕಿರುವುದು ಇಂದ್ರೀಯ ನಿಗ್ರಹ ಶಕ್ತಿ. ಆ ಶಕ್ತಿ ಇಲ್ಲದೆ ನಾವು ಏನೂ ಮಾಡಲಾರೆವು. ಇಂದ್ರಿಯಗಳ ದಾಸರಾಗಿ ಬದುಕುವಲ್ಲಿ ಭೋಗಲಾಲಸೆಗಳೇ ನಮ್ಮನ್ನು ಆತ್ಮದೇಗುಲದ ದ್ವಾರದ ಹೊರಗೆ ತಡೆದು ನಿಲ್ಲಿಸುತ್ತವೆ. ಇನ್ನು ಆ ದೇಗುಲವನ್ನು ಪ್ರವೇಶಿಸುವ ಮಾತೆಲ್ಲಿ? ಆತ್ಮ ಸಾಕ್ಷಾತ್ಕಾರಕ್ಕಾಗಿ ನಡೆಸಬೇಕಾದ ಮೊದಲ ಹೋರಾಟದಲ್ಲಿ ನಾವು ಕಾಮನೆ ಎಂಬ ಶತ್ರುವನ್ನೇ ಸೋಲಿಸಬೇಕಾಗಿದೆ. ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೀಗೆ ಹೇಳುತ್ತಾನೆ. ಯಾವ ರೀತಿ ಹೊಗೆಯಿಂದ ಅಗ್ನಿಯು ಮುಚ್ಚಿಕೊಂಡಿರುವುದೋ ಕೊಳೆಯಿಂದ ಕನ್ನಡಿಯು ಮುಚ್ಚಿಕೊಂಡಿರುವುದೋ ಜರಾಯುವೆಂಬ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಿರುವುದೋ ಹಾಗೆಯೇ ಕಾಮದಿಂದ ಆತ್ಮನ ಕುರಿತಾದ ಜ್ಞಾನವು ಮುಚ್ಚಲ್ಪಟ್ಟಿದೆ. ಹೊಗೆಯಿಂದ ಮುಚ್ಚಲ್ಪಟ್ಟ ಅಗ್ನಿಯ ಅಸ್ತಿತ್ವವು ಹೊರಗಿನಿಂದ ನಮಗೆ ಕಾಣದು. ಅದರ ಶಕ್ತಿ-ಸಾಮರ್ಥ್ಯವನ್ನಾಗಲೀ ಪ್ರಕೋಪವನ್ನಾಗಲೀ ನಾವು ಅರಿಯಲಾರೆವು. ಹೊಗೆ ಮಾತ್ರವೇ ಕಂಡುಬರುವ ಕಾರಣಕ್ಕೆ ಅಲ್ಲಿ ಅಗ್ನಿಯೇ ಇಲ್ಲವೆಂದು ಹೇಳಿದರೆ ಹೇಗಾದಿತು? ಆದರಿಂದ ಉಂಟಾಗಬಹುದಾದ ದುರಂತಕ್ಕೆ ನಾವು ಕಾರಣರಾಗುವುದಿಲ್ಲವೆ? ಹಾಗೆಯೇ ಕೊಳೆಯಿಂದ ಮುಚ್ಚಲ್ಪಟ್ಟಿರುವ ಕನ್ನಡಿಯು ನಮಗೆ ನಮ್ಮ ಯಥಾರ್ಥ ಸ್ವರೂಪವನ್ನು ಕಾಣಿಸದು. ನಮ್ಮನ್ನು ನಾವು ಕಾಣುವ, ಅರಿಯುವ ಪ್ರಯತ್ನಕ್ಕೆ ಆ ಕೊಳೆಯು ಅಡ್ಡಿಯುಂಟು ಮಾಡುವುದು. ಹಾಗೆಂದು ಅದು ಕನ್ನಡಿಯ ದೋಷವಾದೀತೇ? ಕನ್ನಡಿಗೆ ಅಂಟಿಕೊಂಡ ಕೊಳೆಯನ್ನು ನಿರ್ಮೂಲನ ಮಾಡಿದಾಗ ಮಾತ್ರವೇ ದರ್ಪಣವು ನಮಗೆ ಯಥಾರ್ಥ ದರ್ಶನ ಭಾಗ್ಯವನ್ನು ಕೊಟ್ಟೀತು. ಜರಾಯುವೆಂಬ ಪೊರೆಯಿಂದ ಬಂಧಿತವಾಗಿರುವಷ್ಟು ಕಾಲ ಗರ್ಭಕ್ಕೆ ಮುಕ್ತಿಯುಂಟೆ? ಹಾಗೆಯೇ ನಮ್ಮಲ್ಲಿ ತುಂಬಿಕೊಂಡಿರುವ ಕಾಮನೆಗಳನ್ನು ಪೂರ್ತಿಯಾಗಿ ಕಿತ್ತೊಯದೇ ಆತ್ಮಸಾಕ್ಷಾತ್ಕಾರದ ಸೌಭಾಗ್ಯ ನಮಗೆ ಲಭಿಸಲುಂಟೆ?