ಮಾನವ ಬದುಕಿನಲ್ಲಿ ಕಾಮಕ್ಕೆ ಸ್ಥಾನವೇ ಇಲ್ಲ ಎಂದು ಯಾರೂ ತಿಳಿಯುವಂತಿಲ್ಲ ಬದುಕಿನ ನಾಲ್ಕು ಪುರುಷಾರ್ಥಗಳಲ್ಲಿ ಕಾಮಕ್ಕೆ ಕೂಡ ಸ್ಥಾನವನ್ನು ಕಲ್ಪಿಸಲಾಗಿದೆ. ಈ ಪುರುಷಾರ್ಥಗಳಲ್ಲಿ ಮೊದಲನೆಯದು ಧರ್ಮ; ಅನಂತರದ್ದು ಅರ್ಥ; ಮೂರನೆಯದು ಕಾಮ; ಕೊನೆಯದು ಮೋಕ್ಷ ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ತತ್ತ್ವಕ್ಕೆ ಬದ್ಧವಾಗಿ ಬಾಳಲು ನಮಗೆ ಧರ್ಮವು ಬೇಕು. ಅದುವೇ ನಮ್ಮೆಲ್ಲರನ್ನೂ ಸತ್ಪಥದಲ್ಲಿ ನಡೆಸುವ ದಾರಿದೀಪವೂ ಮಾರ್ಗದರ್ಶಕವೂ ಆಗಿದೆ. ಅರ್ಥ ಸಾಧನೆಗೆ ಧರ್ಮವೇ ಮುಖ್ಯ. ಅಡ್ಡಹಾದಿಯಲ್ಲಿ ಮಾಡುವ ಅರ್ಥದ ಸಂಪಾದನೆ ಹೆಚ್ಚಿದರೆ ಸಂಪತ್ತಿನ ಗಳಿಕೆಯಿಂದ ಬಾಳು ದುಃಖಮಯವಾಗುವುದು. ಆದುದರಿಂದ ಗಳಿಸಿದ ಸಂಪತ್ತಿನಿಂದ ಸುಖ ಸಂತೋಷ ಸಿಗಬೇಕೆಂದಾದರೆ ಅದನ್ನು ಧರ್ಮದ ಚೌಕಟ್ಟನೊಳಗೇ ಗಳಿಸುವಂತಿರಬೇಕು. ಬೇರೆಯವರ ತಲೆಯೊಡೆದು ಗಳಿಸಿದ ಸಂಪತ್ತಿನಿಂದ ಸ್ವಂತಕ್ಕೆ ಅಧೋಗತಿ ಉಂಟಾಗುವುದು. ಮಾತ್ರವಲ್ಲ ಹೆಂಡತಿ-ಮಕ್ಕಳು, ಬಂಧುಬಳಗದ ಸರ್ವನಾಶಕ್ಕೂ ಹೇತುವಾದೀತು. ಸದ್ಧರ್ಮ ಪಾಲನೆಯಿಂದ ಗಳಿಸುವ ಸಂಪತ್ತಿನ ಚೌಕಟ್ಟನೊಳಗೇ ಕಾಮವನ್ನು ಅನುಭವಿಸಬೇಕು. ಅದು ಗೃಹಸ್ಥಾಶ್ರಮದ ಬಂಧನಕ್ಕೆ ಒಳಪಟ್ಟೇ ಇರಬೇಕು ವಿನಾ ಅದರ ಹೊರಗಲ್ಲ. ಹೀಗೆ ಧರ್ಮದ ಅಂಕುಶದಲ್ಲಿ ಅರ್ಥ ಹಾಗೂ ಕಾಮ ಪ್ರಾಪ್ತವಾಗಬೇಕು. ಇದು ಸಾಧ್ಯವಾದರೆ ಮಾತ್ರವೇ ಮೋಕ್ಷದ ಹಾದಿ ಸುಗಮ. ಧರ್ಮವನ್ನು ಪರಿಪಾಲಿಸುತ್ತಾ ಅದರ ಚೌಕಟ್ಟಿನೊಳಗೆ ಅರ್ಥ ಮತ್ತು ಕಾಮವನ್ನು ಅನುಭವಿಸಬೇಕೆಂಬಲ್ಲಿ ಬದುಕಿನ ಸಮತ್ವದ ಸೂತ್ರವಿದೆ ಎಂಬುವುದನ್ನು ನಾವು ಗಮನಿಸಬೇಕು. ಆದರೆ ಇಂದು ಈ ಸಮತ್ವದ ಅಭಾವವನ್ನು ನಾವು ಅನುಭವಿಸುತ್ತಿದ್ದೇವೆ. ಧರ್ಮದ ಪರಿಕಲ್ಪನೆ ಸರ್ವತ್ರ ಗೋಜಲಾಗಿದೆ. ಹಾಗಾಗಿ ಅರ್ಥದ ಗಳಿಕೆಗೆ ಧರ್ಮದ ಮಾರ್ಗದರ್ಶನ ಇಲ್ಲವಾಗಿದೆ. ಹೇಗೆ ಬೇಕಾದರೂ ಅರ್ಥವನ್ನು ಗಳಿಸಿ ಆನಂದದಿಂದ ಬದುಕುಬಹುದು ಎಂಬ ಭಾವನೆಯೇ ವ್ಯಾಪಕವಾಗಿದೆ