125.ಆತ್ಮಬಲವೇ ಮುಖ್ಯ
ಎಷ್ಟೋ ವೇಳೆ ನಾವು ದೇಹದಾಢ್ರ್ಯವನ್ನು ಬೆಳೆಸಿಕೊಂಡರೆ ಶಕ್ತಿವಂತರೆನಿಸಿ ಕೊಳ್ಳಬಹುದೆಂದು ಭಾವಿಸುತ್ತೇವೆ. ದೇಹವೇ ಪರಮಸತ್ಯವೆಂದು ಭಾವಿಸುವವರಲ್ಲಿ ಈ ಅಭಿಪ್ರಾಯ ಸಹಜವಾಗಿಯೇ ಇರುತ್ತದೆ. ಆದರೆ ಕೇವಲ ದೇಹಬಲವೊಂದೇ ನಿಜವಾದ ಶಕ್ತಿಯಲ್ಲ. ಕರಾಟೆ, ಕುಂಗ್ಫು ಪಟುಗಳ ದೇಹ ಗಾತ್ರ ಅಷ್ಟೇನೂ ಸ್ಥೂಲವಾಗಿರುವುದಿಲ್ಲ. ಆದರೂ ಆ ಪಟುಗಳು ತೋರುವ ಶಕ್ತಿಸಾಮಥ್ರ್ಯ ಅಸಾಧಾರಣವಾದದ್ದು. ಅವರ ದೇಹದ ಹಿಂದಿರುವ ಮನಸ್ಸಿನ ಶಕ್ತಿ, ಅ ಮನಸ್ಸಿನ ಶಕ್ತಿಯನ್ನು ನೂರು ಪಟ್ಟು ವೃದ್ಧಿಸುವ ಬುದ್ಧಿ ಶಕ್ತಿ ಮತ್ತು ಆ ಬುದ್ಧಿಶಕ್ತಿಯನ್ನು ಸಾವಿರ ಸಾವಿರ ಪಟ್ಟು ಹೆಚ್ಚಿಸುವ ಆತ್ಮಶಕ್ತಿ ಅತ್ಯದ್ಭುತವಾದದ್ದು. ಕಾಮನೆಗಳೆಂಬ ಶತ್ರುಗಳನ್ನು ನಿರಂತರವಾಗಿ ಎದುರಿಸಬೇಕಾಗಿರುವ ನಮಗೆ ನಮ್ಮ ಜೀವನವೇ ಬಲುದೊಡ್ಡ ಕುರುಕ್ಷೇತ್ರ. ಅಲ್ಲಿ ಒಳಿತು ಕೆಡುಕುಗಳ ನಡುವೆ ನಿರಂತರ ಸಂಘರ್ಷ ಸಾಗಿಯೇ ಇರುತ್ತದೆ. ಆದುದರಿಂದಲೇ ವಿವೇಕಾನಂದರು ಹೇಳುತ್ತಾರೆ. ;ಜೀವನವೆಂಬುದು ಕಠಿನ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರಿಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮಶಕ್ತಿಯು ಅದಕ್ಕಿಂತ ಬಲಯುತವಾದದ್ದು. ಈ ಇಡಿಯ ಪ್ರಪಂಚವೇ ಒಂದು ದೊಡ್ಡ ಗರಡಿ ಮನೆಯಾಗಿದೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.’ ಪ್ರಕೃತಿಯು ಒಡ್ಡುವ ಸಮಸ್ತ ಪ್ರಲೋಭನೆಗಳನ್ನು ಆತ್ಮಬಲವೊಂದರಿಂದಲೇ ಎದುರಿಸಿ ನಿಲ್ಲುವ ಶಕ್ತಿಯನ್ನು ನಾವು ಪಡೆಯಬೇಕಾಗಿದೆ. ಆತ್ಮಬಲ ಇಲ್ಲದಿದ್ದರೆ ಬೇರಾವುದರಿಂದಲೂ ನಾವು ಶಕ್ತಿವಂತರೆನಿಸಲಾರೆವು. ಆತ್ಮಬಲದಿಂದ ಶಕ್ತಿಸಂಪನ್ನರಾಗಿರುವವರು ಮಾತ್ರವೇ ನಿಜವಾದ ಧೀರರು. ಅವರು ನೀತಿವಂತರೂ ಸಹಾನುಭೂತಿ ಉಳ್ಳವರೂ ಆಗಿರುತ್ತಾರೆ. ಅದಕ್ಕೆಂದೇ ವಿವೇಕಾನಂದರು ಹೇಳುತ್ತಾರೆ. ನಿಮ್ಮನ್ನು ನೀವು ಜಯಿಸಿ, ಇಡಿಯ ಜಗತ್ತೇ ನಿಮ್ಮದಾಗುತ್ತದೆ.