- ಜಯ ನಿಶ್ಚಿತ
ಹೇಗೆ ಯೋಚಿಸುತ್ತೇವೋ ಹಾಗೆ ನಾವಾಗುತ್ತೇವೆ ಎಂಬ ಮಾತಿದೆ. ನಾವು ಬಲವಂತರೆಂದು ಸದಾ ಭಾವಿಸುವವರಾದರೆ ನಿಜಕ್ಕೂ ನಮ್ಮಲ್ಲಿ ಧೈರ್ಯ, ಉಲ್ಲಾಸ, ಕಾರ್ಯಸಾಮಥ್ರ್ಯ ಸಹಜವಾಗಿಯೇ ಪುಟಿಯುತ್ತಿರುತ್ತದೆ. ನಾವು ದುರ್ಬಲರೆಂದು ಭಾವಿಸುವವರಾದರೆ ಸಹಜವಾಗಿಯೇ ನಮ್ಮಲ್ಲಿ ಅಂಜಿಕೆ, ಹಿಂಜರಿಕೆ, ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ, ಆದುದರಿಂದ ನಾವು ನಮ್ಮ ಬಗ್ಗೆ ಹೇಗೆ ಯೋಚಿಸುತ್ತೇವೋ ಹಾಗೆಯೇ ನಾವಾಗುತ್ತೇವೆ ಎನ್ನುವ ಮಾತು ಸತ್ಯ. ಅಂತೆಯೇ ಸ್ವಾಮಿ ವಿವೇಕಾನಂದರು ನಮ್ಮನ್ನು ಎಚ್ಚರಿಸುತ್ತಾರೆ: ‘ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ತಿಳಿದರೆ ನೀವು ಋಷಿಗಳೇ ಆಗುವಿರಿ. ಪ್ರತಿಯೊಬ್ಬನಲ್ಲಿಯೂ ಪೂರ್ಣ ಋಷಿತ್ವವನ್ನು ಪಡೆಯುವ ಸಾಮಥ್ರ್ಯ ಅಂತರ್ನಿಹಿತವಾಗಿಯೇ ಇದೆ’. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಮ್ಮೊಳಗೆ ಅಂತನಿರ್ಹಿತವಾಗಿರುವ ಸಾಮಥ್ರ್ಯವನ್ನು ನಾವು ಕಂಡುಕೊಳ್ಳುವುದು. ಅದನ್ನು ಕಂಡುಕೊಳ್ಳದೇ ನಾವು ನಮಗೆ ಮನಬಂದಂತೆ ನಮ್ಮ ಬಗ್ಗೆ ಯೋಚಿಸುವವರಾದರೆ ಅದು ಹಗಲುಗನಸೇ ಆದೀತು. ಆತ್ಮ ಶ್ರದ್ಧೆಯನ್ನು ಜಾಗೃತಗೊಳಿಸದೆ ನಾವು ನಮ್ಮ ಬಗ್ಗೆ ಇತ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳಲಾರೆವು ಎನ್ನುವುದು ಮುಖ್ಯ. ಸ್ವಾಮಿ ವಿವೇಕಾನಂದರ ಪ್ರಕಾರ ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ ವ್ಯಕ್ತಿಗಳ ಇತಿಹಾಸವೇ ಆಗಿದೆ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನಾವು ಏನನ್ನು ಬೇಕಾದರೂ ಸಾಧಿಸಬಹುದು’. ನಮ್ಮ ಇಂದ್ರಿಯಗಳು, ಮನಸ್ಸು ಹಾಗೂ ಬುದ್ಧಿಯನ್ನು ಚೆನ್ನಾಗಿ ನಿಯಂತ್ರಿಸಬಲ್ಲ ಆತ್ಮಶಕ್ತಿಯನ್ನು ನಾವು ಪಡೆದೆವೆಂದರೆ ಬದುಕೆಂಬ ಹೋರಾಟದಲ್ಲಿ ನಮಗೆ ಜಯ ನಿಶ್ಚಿತ.