Home » ವಿನೀತಭಾವ
 

ವಿನೀತಭಾವ

by Kundapur Xpress
Spread the love

ನಮ್ಮ ಬದುಕು ನಮಗೆ ಅಸಹನೀಯವಾಗುವಂತೆ ಮಾಡುವುದು ಹೊರಗಿನ ಯಾವುದೇ ಶಕ್ತಿಗಳಲ್ಲ. ನಮ್ಮೊಳಗಿನ ವೈರಿಗಳಿಂದಾಗಿಯೇ ಹೊರಗಿನ ಶಕ್ತಿಗಳು ನಮ್ಮ ವಿರುದ್ಧ ಕ್ರಿಯಾಶೀಲವಾಗುತ್ತವೆ. ಆ ವೈರಿಗಳಲ್ಲಿ ಅಹಂಭಾವವೂ ಒಂದು. ಅಹಂಭಾವವೆಂಬ ನಮ್ಮೊಳಗಿನ ರಾಕ್ಷಸನನ್ನು ನಾವು ಸಂಹರಿಸಿದರೆ ನಮ್ಮ ಬದುಕು ಸುಂದರವೂ ಸಂತಸವಯವೂ ಆಗುವುದರಲ್ಲಿ ಸಂದೇಹಬೇಡ. ದೇವರ ಸಾನಿಧ್ಯವನ್ನು ಪಡೆಯಲು ಅಹಂಭಾವದ ಲವಲೇಶವೂ ನಮ್ಮಲ್ಲಿ ಇರಕೂಡದು. ನಾನು, ನನ್ನದು ಎಂಬ ಅಹಂಭಾವದಲ್ಲಿ ದೇವರ ಸೃಷ್ಟಿಯಲ್ಲಿ ಎಲ್ಲವೂ ಗೌಣವಾಗಿ ಕಂಡು ಬರುವುದರಲ್ಲಿ ಆಶ್ಚರ್ಯವಿಲ್ಲ.  ಎಲ್ಲರೂ ನನ್ನನ್ನು ಗೌರವಾದರದಿಂದ ಕಾಣಬೇಕೆಂಬ ಹೆಬ್ಬಯಕೆಯೊಂದೆ ಹೆಡೆಯೆತ್ತುವುದು. ದೇವರಿಗೆ ಸಂಪೂರ್ಣ ಶರಣಾಗತಿಯನ್ನು ತೋರದೆ ಹೋದರೆ ದೇವರ ಕೃಪೆ ದೊರಕುವುದು ಅಸಾಧ್ಯ ಎನ್ನುತ್ತದೆ ಪವಿತ್ರ ಗ್ರಂಥ  ಸಂಪೂರ್ಣ ಶರಣಾಗತಿ ಭಾವವೂ ಮನದಲ್ಲಿ ಮನೆಮಾಡಬೇಕಾದರೆ ನಾನು, ನನ್ನದು ಎಂಬ ಅಹಂಕಾರದ ಲವಲೇಶವೂ ಇರಕೂಡದು. ಆಗ ಮಾತ್ರವೇ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ. ಹಾಗೆಯೇ ಸತ್ಕರ್ಮಗಳಲ್ಲಿ ತೊಡಗಲು ಕೂಡ ಅಹಂಭಾವದ ಲವಲೇಶವೂ ಇರಕೂಡದು. ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿರುವಂತೆ ಸತ್ಕರ್ಮಗಳನ್ನು ಕೈಗೊಂಡವರಿಗೆ ಇಹ ಲೋಕದಲ್ಲೂ ಪರಲೋಕದಲ್ಲೂ ಒಳ್ಳೆಯದೇ ಆಗುತ್ತದೆ. ಪವಿತ್ರ ಗ್ರಂಥ  ಹೇಳುತ್ತದೆ: ದೇವರ ಬಗೆಗಿನ ನಿನ್ನ ಕರ್ತವ್ಯಗಳನ್ನು ನಿಭಾಯಿಸಿ. ಸತ್ಕರ್ಮಗಳನ್ನು ಕೈಗೊಳ್ಳುವವನನ್ನು ದೇವರು ಸದಾ ಮೆಚ್ಚುವನು. ಅಹಂಭಾವವನ್ನು ಗೆದ್ದರೆ ಸತ್ಕರ್ಮಗಳನ್ನು ಕೈಗೊಳ್ಳಲು ಬಹಳ ದೂರವೇನೂ ನಾವು ಹೋಗಬೇಕಾಗಿಲ್ಲ. ಎಲ್ಲಿರುವೆವೋ ಅಲ್ಲಿಯೇ ನಾವದನ್ನು ಮಾಡಬಹುದು. ‘ನಿನ್ನ ಮನೆಯ ಬಳಿಯೆ ಸತ್ಕರ್ಮಗಳನ್ನು ಕೈಗೊಳ್ಳು, ಬಹುದೂರ ಹೋಗಿ ನೀನು ಸುವಾಸನೆಯುಳ್ಳ ಅಗರಬತ್ತಿಯನ್ನು ಉರಿಸಬೇಕಾಗಿಲ್ಲ’ ಎಂದು ಚೀನಿ ಗಾದೆಯೊಂದು ಹೇಳುತ್ತದೆ. ಅಹಂಕಾರ, ಅಹಂಭಾವದಿಂದ ಮುಕ್ತವಾಗಿ ಸತ್ಕರ್ಮಗಳನ್ನು ಕೈಗೊಂಡರೆ ಎಲ್ಲೆಡೆಯೂ ದೇವರನ್ನು ಕಾಣುವ ವಿನೀತಭಾವ ನಮ್ಮಲ್ಲಿ ಜಾಗೃತಗೊಳ್ಳುತ್ತದೆ. ಆತ್ಮೋನ್ನತಿಗೆ ಅದು ಕಾರಣವಾಗುತ್ತದೆ.

   

Related Articles

error: Content is protected !!