ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವದಲ್ಲಿ ಇಂದ್ರಿಯ ಸುಖಭೋಗಗಳನ್ನು ಹೆಚ್ಚೆಚ್ಚು ಅಪೇಕ್ಷೆ ಪಡುವ ನಾವು ನಿಜವಾಗಿಯೂ ನಮ್ಮ ಬದುಕನ್ನು ದುಃಖ ಸಾಗರಕ್ಕೆ ದೂಡುತ್ತಿದ್ದೇವೆ. ದೇಹ ಸಂಬಂಧವಾದ ನಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುವ ಮೂಲಕ ನಾವು ನಿಜಕ್ಕೂ ಭಾವಿಸುವುದು ಏನನ್ನು? ‘ಇದೊಂದು ಆಸೆಯನ್ನು ಪೂರೈಸಿದರೆ ಮತ್ತೆ ಸಂತಸದಿಂದ ಬದುಕಬಹುದು’ಎಂದು ತಾನೆ? ಆದರೆ ಆಸೆಗಳು ಅಗಣಿತ. ಅರ್ಥಶಾಸ್ತ್ರಜ್ಞ ಆ್ಯಡಂ ಸ್ಮಿತ್ ಇದನ್ನು ನೂರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಆದರೆ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಗೌತಮ ಬುದ್ಧ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಇಷ್ಟು ತಿಳಿದರೂ ಆಸೆಗಳು ಅಗಣಿತವೆಂಬ ಪ್ರಜ್ಞೆ ನಮ್ಮಲ್ಲಿ ಮೂಡುವುದೇ ಇಲ್ಲ. ಹಾಗಾಗಿ ನಮ್ಮ ಬದುಕು ಪುಟ್ಟ ಮಕ್ಕಳು ಆಡುವ ಆಟಕ್ಕಿಂತ ಭಿನ್ನವೇನೂ ಅಲ್ಲ. ತನಗೆ ಬೇಕೆನಿಸುವ ಆಟಿಕೆಗಳನ್ನು ಕೂಡಿಸೆಂದು ತಾಯ್ತಂದೆಯರನ್ನು ಕಾಡಿಸಿ ಪೀಡಿಸುವ ಪುಟ್ಟ ಮಕ್ಕಳಂತೆ ನಾವು ಕೂಡ. ಆದುದರಿಂಲೇ ಇಂದ್ರಿಯ ಸುಖದ ಬೆನ್ನು ಹತ್ತಿದವರಿಗೆ ದುಃಖ ನಿಶ್ಚಿತ. ಸ್ವಾಮಿ ವಿವೇಕಾನಂದರ ಪ್ರಾಕಾರ ‘ಒಬ್ಬನು ಎಷ್ಟು ಕಡಿಮೆ ಇಂದ್ರಿಯ ಸುಖವನ್ನು ಅನುಭವಿಸುವನೋ ಅಷ್ಟೂ ಅವನು ಉತ್ತಮ ರೀತಿಯಲ್ಲಿ ಬದುಕುವನು’ ಎಂಬ ಮಾತು ಅಕ್ಷರಶಃ ಸತ್ಯ. ಇಂದ್ರೀಯ ಸುಖವೇ ಪರಮ ಸುಖವಲ್ಲ; ಇದಕ್ಕಿಂತಲೂ ಸುಖಕೊಡುವ ಬೇರೆ ವಿಚಾರಗಳೂ ಇವೆ ಎಂಬ ಸತ್ಯದ ಕಡೆಗೆ ಮುಖ ಮಾಡಿದಾಗ ಮಾತ್ರವೇ ಬದುಕಿನಲ್ಲಿ ಆನಂದದ ಆಶಾಕಿರಣಗಳು ಮೂಡಲಾರಂಭಿಸುತ್ತವೆ. ಬದುಕಿನ ಸತ್ಯಗಳನ್ನು ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಾಗಲೇ ನಿಜವಾದ ಪ್ರೇಮವೆಂದರೆ ಏನು ಎಂಬ ಅಂಶ ಗೋಚರವಾಗುತ್ತದೆ.