ಮಣಿಪಾಲ:: ಕೊರೊನಾ ಕಾಲಘಟ್ಟದ ಸಂದಿಗ್ಧ ಪರಿಸ್ಥಿತಿ ಸಹಿತವಾಗಿ ಕಳೆದ 9 ವರ್ಷಗಳಿಂದ ಕೇಂದ್ರ ಸರಕಾರವು ದೇಶದ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಎಲ್ಲ ವ್ಯವಸ್ಥೆ ಮಾಡಿದೆ ಮತ್ತು ದೇಶವು ಸೇವೆಯ ಉತ್ಕೃಷ್ಟತೆಯನ್ನು ಕಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಮಣಿಪಾಲದ ಕಂಟ್ರಿ ಇನ್ ಹೊಟೇಲ್ ನಲ್ಲಿ ಜು.14ರಂದು ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ್ದಾರೆ ಎಂದರು.
50-60 ವರ್ಷಗಳಿಂದ ಬಡತನ ನಿರ್ಮೂಲನೆ ಘೋಷಣೆಯಾಗಿತ್ತು. 2013ರ ಅನಂತರದಲ್ಲಿ ಜನರ ಜೀವನ ಮಟ್ಟ ಬದಲಾಗಿದೆ. ಮನೆ ಮನೆಗೆ ನೀರು, ಗ್ಯಾಸ್, ಶೌಚಾಲಯದ ವ್ಯವಸ್ಥೆಯಾಗುತ್ತಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಾಣ, ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ಸೇವೆ, ಜನೌಷಧದ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಔಷಧ ಒದಗಿಸುವುದು ಸೇರಿದಂತೆ ಜನರ ಮೂಲ ಸೌಕರ್ಯ ಸುಧಾರಿಸಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮದು ಭ್ರಷ್ಟಾಚಾರ ಇಲ್ಲದ ಶುದ್ಧ ಸರಕಾರ. ಅನುದಾನ ಬಳಕೆಯಲ್ಲೂ ಯಾವುದೇ ಲೋಪವಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಅನುದಾನದ ಹಂಚಿಕೆ ಮತ್ತು ಬಳಕೆಗೆ ಸರಿಯಾದ ಕ್ರಮ ಅನುಸರಿಸುತ್ತಿದ್ದೇವೆ. ಪ್ರಧಾನಿ ಮೋದಿಯವರು ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಗಮನಾರ್ಹ ಸಾಧನೆ ಮಾಡಿದೆ. ಉಡುಪಿಯ ಯು.ಆರ್. ರಾವ್ ಸಹಿತವಾಗಿ ಅನೇಕರು ಇಸ್ರೊ ಕಟ್ಟಿ ಬೆಳೆಸಲು ತಮ್ಮದೆ ಕೊಡುಗೆ ನೀಡಿದ್ದಾರೆ. ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ಅನುದಾನ ಕಡಿಮೆ ಮಾಡಿಲ್ಲ. ಪ್ರಗತಿಯಲ್ಲಿರುವ ಯೋಜನೆಗಳಿಗೆ ಅನುದಾನ ಒದಗಿಸಿದ್ದೇವೆ. ಆದರೆ, ಈಗಾಗಲೇ ಪೂರ್ಣಗೊಂಡಿರುವ ಯೋಜನೆಗೆ ಪುನರ್ ಅನುದಾನ ನೀಡಿಲ್ಲ. ಹೊಸ ಯೋಜನೆಗಳಿಗೆ ಅನುದಾನ ನೀಡುತ್ತಿದ್ದೇವೆ ಮತ್ತು ಎಲ್ಲರ ಒಗ್ಗೂಡಿಕೆಯಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು