ಕುಂದಾಪುರ :ವಿಶ್ವಮಾನ್ಯತೆ ಹೊಂದಿರುವ ಕುಂದಾಪ್ರ ಕನ್ನಡ ದಿನವನ್ನು ವಕ್ವಾಡಿ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಅರ್ಥಬದ್ಧವಾಗಿ ಆಚರಿಸಿದರು. ಜೊತೆಗೆ ಕುಂದಾಪುರ ಭಾಷೆಯಾಧಾರಿತ ವಿವಿಧ ಹಾಡು ಮತ್ತು ನೃತ್ಯ ಕುಂದಾಪ್ರದ ರೀತಿರಿವಾಜುಗಳು,ಆಷಾಡ ಮಾಸದಲ್ಲಿ ತಯಾರಿಸುವ ವಿಶೇಷ ಪದಾರ್ಥಗಳ ಮಹತ್ವವನ್ನು ತಮ್ಮ ಭಾಷೆಯ ಸವಿಯಲ್ಲಿ ವಿದ್ಯಾರ್ಥಿಗಳು ಎಲ್ಲರಿಗೂ ಉಣಬಡಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಕಿಶೋರ ಕುಮಾರ್ ಶೆಟ್ಟಿ, ಕನ್ನಡ ಶಿಕ್ಷಕರು,ಸರ್ಕಾರಿ ಪ್ರೌಢಶಾಲೆ ಹಕ್ಲಾಡಿ ಇವರು ತಮ್ಮ ಅತಿಥಿ ಭಾಷಣದಲ್ಲಿ ವಿಭಿನ್ನ ಕನ್ನಡ ಭಾಷೆ ಗಳಿದ್ದರೂ ಕುಂದಾಪ್ರ ಕನ್ನಡ ಭಾಷೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಗ್ಗಳಿಕೆಯನ್ನು ಪಡೆಯುತ್ತಿದೆ ಎನ್ನುವುದನ್ನು ವಿವಿಧ ಕುಂದಾಪ್ರ ಜನಪದ ಹಾಡು, ರಾಮಾಯಣದ ಕಥೆಯ ಮೂಲಕ ಮಕ್ಕಳಿಗೆ ಅದರ ಒಳಾರ್ಥದ ಅರಿವು ಮೂಡಿಸುವಂತೆ ತಿಳಿಸಿದರು. ಇದು ಭಾಷೆಯಲ್ಲ ಕುಂದಾಪುರ ಜನರ ಬದುಕು, ಹಾಗಾಗಿ ಇದು ನಮ್ಮ ತಾಯಿ ಭಾಷೆ ಈ ಭಾಷೆಯನ್ನು ಗೌರವಿಸಿ, ಪ್ರೀತಿಸಿ ಉಳಿಸಿಕೊಳ್ಳುವ ಪ್ರಯತ್ನ ಇಂದಿನ ಯುವ ಪೀಳಿಗೆಯಿಂದ ಆಗಬೇಕು, ಈ ಭಾಷೆಗೆ ಇನ್ನಷ್ಟು ಪ್ರಶಸ್ತಿಗಳು ಬರುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ,ಅಂತಹ ಕೆಲಸವನ್ನು *ಗುರುಕುಲ ವಿದ್ಯಾಸಂಸ್ಥೆ* ಮಾಡುತ್ತಿದೆ, ಶಿಕ್ಷಣದ ಜೊತೆಜೊತೆಗೆ ನಮ್ಮ ಆಚಾರವಿಚಾರಗಳ ಅರಿವು ಮಕ್ಕಳಲ್ಲಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಹಕಿ *ಶ್ರೀಮತಿ. ಅನುಪಮಾ ಶೆಟ್ಟಿ* ಕುಂದಾಪ್ರ ಭಾಷೆ ನಮ್ಮ ಹೆಮ್ಮೆ ಇದನ್ನು ಎಲ್ಲರೂ ಜೊತೆ ಸೇರಿ ಉಳಿಸಿ ಬೆಳೆಸುವ ಎಂದು ತಿಳಿಸುತ್ತ ವಿದಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ *ಶ್ರೀ ಮೋಹನ್.ಕೆ* ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕು.ಸುರ್ವಿ ಮತ್ತು ಸಾನ್ವಿ ನಿರೂಪಿಸಿ, ಕು .ಶಿರಿನ್ ಸ್ವಾಗತಿಸಿ,ಕು.ಸನ್ನಿಧಿ ವಂದಿಸಿದರು. ಅತಿಥಿ ಪರಿಚಯವನ್ನು ಕು.ಸಹನಾ ಮಾಡಿದರು.