ದೇವರ ಸಾಕ್ಷಾತ್ಕಾರವನ್ನು ಪಡೆಯುವುದು ನಿಜಕ್ಕೂ ಬಹಳ ಕಷ್ಟದ ಮಾತೇನು? ಅದಕ್ಕಾಗಿ ಸನ್ಯಾಸವನು ಕೈಗೊಂಡು ಹಿಮಾಲಯದ ತಪ್ಪಲಲ್ಲಿ ಉಗ್ರವಾದ ತಪಸ್ಸನ್ನು ಕೈಗೊಳ್ಳಬೇಕೇನು? ಐಹಿಕ ಸುಖ ಭೋಗಗಳಲ್ಲಿ ಮುಳುಗಿರುವವರು ಉದ್ಧಾರವಾಗುವ ಮಾತೇ ಇಲ್ಲವೇ? ದೇವರನ್ನು ಒಲಿಸಿಕೊಳ್ಳಲು ನಾವು ಮಾಡಬೇಕಾದದ್ದು ಏನು? ಈ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಆದರೆ ಅದಕ್ಕೆ ಉತ್ತರ ಮಾತ್ರ ತುಂಬಾ ಸರಳವಾಗಿದೆ. ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳುತ್ತಾನೆ: ‘ನನ್ನ ಈ ಜನ್ಮ ಮತ್ತು ಕರ್ಮವು ದಿವ್ಯವಾಗಿವೆ. ಅರ್ಥಾತ್ ಅಲೌಕಿಕವಾಗಿವೆ. ನನ್ನ ಮಹಿಮೆಯನ್ನು ಯಾರು ಯಥಾರ್ಥವಾಗಿ ತಿಳಿದುಕೊಳ್ಳುತ್ತಾರೋ ಅವರು ತಮ್ಮ ಶರೀರವನ್ನು ತ್ಯಜಿಸಿದ ಬಳಿಕ ಮತ್ತೆ ಜನ್ಮವನ್ನು ಪಡೆಯುವುದಿಲ್ಲ, ಜನನ–ಮರಣಗಳ ಚಕ್ರದಿಂದ ಅವರು ಪಾರಾಗುತ್ತಾರಲ್ಲದೆ ಅವರು ನನ್ನನೇ ಪಡೆಯುತ್ತಾರೆ’. ಶ್ರೀಕೃಷ್ಣನ ಈ ಮಾತನ್ನು ನಾವು ಚೆನ್ನಾಗಿ ಅರಿತುಕೊಂಡರೆ ಪ್ರತಿಯೊಂದು ಜೀವಿಯಲ್ಲಿ, ಪ್ರಾಣಿಯಲ್ಲಿ, ಪಶು–ಪಕ್ಷಿಗಳಲ್ಲಿ, ಮನುಜರಲ್ಲಿ, ಮಾತ್ರವಲ್ಲ ದೇವರ ಈ ದಿವ್ಯ ಸೃಷ್ಟಿಯ ಸಮಸ್ತ ಜಡ–ಚೇತನಗಳಲ್ಲಿ ನಾವು ದೇವರನ್ನೇ ಕಾಣುವುದು ಸುಲಭ ಎಂಬ ವಿಚಾರ ಸ್ಪಷ್ಟವಾಗುತ್ತದೆ. ನಮ್ಮಲ್ಲಿರುವ ಜೀವಾತ್ಮನು ಕೂಡ ಪರಮಾತ್ಮನ ಅಂಶವೇ. ಈ ಸತ್ಯವನ್ನು ಅರಿತರೆ ದೇವರ ಸಮಗ್ರ ಸೃಷ್ಟಿಯನ್ನು ಭಕ್ತಿ, ಶ್ರದ್ಧೆ ಹಾಗೂ ಗೌರವದ ಭಾವದಿಂದ ಕಾಣುವುದು ಸಾಧ್ಯಾವಾಗುತ್ತದೆ. ಮೋಕ್ಷದ ಹಾದಿ ಸುಲಭವಾಗುತ್ತದೆ. ಹಾಗಿರುವಾಗ ದೇವರ ಪರಮ ಪದವನ್ನು ಸೇರುವುದು ಕಷ್ಟದ ಮಾತೇ ಅಲ್ಲ ಎನ್ನುವುದು ಸ್ಪಷ್ಟವಾದ ಹಾಗಾಯಿತು. ದೇವರ ಸಮಗ್ರ ಸೃಷ್ಟಿಯಲ್ಲಿ ದೇವರನ್ನೇ ಕಾಣಲು ಸಾಧ್ಯವಾಗಬೇಕಾದರೆ ನಮ್ಮಲ್ಲಿ ಅನನ್ಯವಾದ ಪ್ರೇಮಭಾವ ಸದಾ ಜಾಗೃತವಿರುವುದು ಅಗತ್ಯ. ನಿಷ್ಕಳಂಕವಾದ ಪ್ರೇಮದಿಂದ ವಿಶ್ವವನ್ನೂ ಗೆಲ್ಲಬಹುದು, ದೇವರನ್ನೂ ಗೆಲ್ಲಬಹುದು!
ಮೋಕ್ಷದ ಹಾದಿ
132
previous post