ಕುಂದಾಪುರ : ತಾಲೂಕಿನ ಮುದೂರು ಹಾಗೂ ಕೆರಾಡಿ ಭಾಗಗಳಲ್ಲಿ ಸರ್ಕಾರಿ ಬಸ್ ಅವ್ಯವಸ್ಥೆ ಖಂಡಿಸಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ನಗರದ ಕೆಎಸ್ಆರ್ ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸಿದರು.
ಕೊಲ್ಲೂರು ಪರಿಸರದ ಮಲೆನಾಡಿನ ತೀರಾ ಗ್ರಾಮೀಣ ಭಾಗದಿಂದ ವಿದ್ಯಾರ್ಜನೆಗಾಗಿ ಹೆಣ್ಣು ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಸರ್ಕಾರಿ ಬಸ್ಸುಗಳಲ್ಲಿ ಕುಂದಾಪುರಕ್ಕೆ ಬರುತ್ತಿದ್ದಾರೆ. ಬಸ್ಸಿನ ವೇಳಾಪಟ್ಟಿಯಲ್ಲಿ ಆಗ್ಗಾಗ್ಗೆ ಆಗುವ ವ್ಯತ್ಯಯದಿಂದಾಗಿ ಕತ್ತಲಾದರೂ ವಿದ್ಯಾರ್ಥಿಗಳು ಮನೆಗೆ ಸೇರಲು ಸಾಧ್ಯಗುತ್ತಿಲ್ಲ. ಬಸ್ಸು ಇಳಿದು 2-3 ಕಿ.ಮೀ ದೂರವನ್ನು ಕಾಡು ಪ್ರದೇಶ, ಕಾಲು ಸಂಕ, ನದಿ, ತೋಡು ದಾಟಿ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಅಳಲು ತೋಡಿಕೊಂಡ ವಿದ್ಯಾರ್ಥಿಗಳು 5 ದಿನಗಳ ಒಳಗೆ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.ಮುದೂರು ಮತ್ತು ಕೆರಾಡಿ ಭಾಗಕ್ಕೆ ಸಂಜೆ 4:30ಗೆ ಇದ್ದ ಬಸ್ಸಿನ ವೇಳಾಪಟ್ಟಿಯನ್ನು 5.15 ಕ್ಕೆ ಮಾಡಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ವಿದ್ಯಾರ್ಥಿಗಳು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಕೆಎಸ್ಆರ್ ಟಿಸಿ ಯ ಸ್ಥಳೀಯ ಅಧಿಕಾರಿಗಳು, ಸಮಸ್ಯೆಯ ಅರಿವು ನಮಗಿದೆ ಆದರೆ ಸಾರಿಗೆ ಪ್ರಾಧಿಕಾರದ ಅನುಮತಿಯಂತೆ ನಾವು ಬಸ್ಸು ಓಡಾಟ ನಡೆಸಬೇಕಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾತ್ಕಾಲಿಕ ಪರ್ಮಿಟ್ ಗೆ ಮನವಿ ಮಾಡಿದ್ದರೂ ಇನ್ನೂ ಅನುಮತಿ ದೊರಕಿಲ್ಲ. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುವುದಾಗಿ ತಿಳಿಸಿದರು.