Home » ಹೃದಯ ದೇಗುಲ
 

ಹೃದಯ ದೇಗುಲ

by Kundapur Xpress
Spread the love

ಒಂದು ದೇವಸ್ಥಾನವಿತ್ತು. ಆ ದೇವಸ್ಥಾನದ ಪೂಜಾರಿಗೆ ದೀನರು, ಬಡವರು, ಸಾಮಾನ್ಯ ಜನರು ದೇವಸ್ಥಾನಕ್ಕೆ ಬರುವುದು ಇಷ್ಟವಾಗುತ್ತಿರಲಿಲ್ಲ. ಒಂದಲ್ಲ ಒಂದು ನೆಪದಲ್ಲಿ ಅವರನ್ನು ಹೀನವಾಗಿ ಕಾಣುತ್ತಾ ‘ನೀವು ಯಾಕಾದರೂ ದೇವಸ್ಥಾನಕ್ಕೆ ಬರುತ್ತೀರಾ? ನಿಮಗೆ ದೇವರು ಒಲಿಯುವುದುಂಟಾ? ಎಂದು ಹಂಗಿಸುತ್ತಿದ್ದ. ಒಮ್ಮೆ ಒಬ್ಬ ಭಕ್ತ ದೇವಸ್ಥಾನಕ್ಕೆ ಬರುತ್ತಿದ್ದಾಗ ಆ ಪೂಜಾರಿ ಆತನನ್ನು ಹೊರಗಿನ ಬಾಗಿಲಲ್ಲೇ ತಡೆದು ಕೇಳಿದ: ‘ಯಾಕೆ ಸುಮ್ಮನೆ ದೇವಸ್ಥಾನಕ್ಕೆ ಬರುತ್ತಿಯಾ? ನಿನ್ನ ದೇಹ-ಮನಸ್ಸು ಯಾವುದೂ ಶುದ್ಧವಾಗಿಲ್ಲ. ಮನಸ್ಸಿನಲ್ಲಿ ಉದ್ವಿಗ್ನತೆ ತುಂಬಿಕೊಂಡಿರುವಾಗ ನಿನಗೆ ಶಾಂತಿ-ಸಮಾಧಾನ ಹೇಗೆ ಸಿಕ್ಕಿತು? ಮೊದಲು ನೀನು ದೇಹ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದನ್ನು ಕಲಿತುಕೋ. ಆ ಬಳಿಕ ದೇವಸ್ಥಾನಕ್ಕೆ ಬಾ. ಈಗ ಇಲ್ಲಿಂದ ಹೋಗು…….’ ಎಂದು ಸಾಗಹಾಕಿದ. ಈ ಭಕ್ತನಿಗೋ ಅ ಪೂಜಾರಿಯ ಮಾತಿನಿಂದ ತುಂಬಾ ವೇದನೆಯಾಯಿತು. ಆದರೆ ದೇವಸ್ಥಾನದ ಒಳಗೆ ಹೋಗಿ ದೇವರನ್ನು ಕಾಣಬೇಕೆಂಬ ಹಂಬಲ ಮಾತ್ರ ಜಾಸ್ತಿಯಾಗತೊಡಗಿತು. ಹೀಗೆ ಸ್ವಲ್ಪ ತಿಂಗಳು ಕಳೆದ ಬಳಿಕ ಒಂದು ದಿನ ಆ ಭಕ್ತ ಅದೇ ದೇವಳದ ಮುಂದೆ ಅತ್ಯಂತ ಪ್ರಸನ್ನವದನನಾಗಿ, ಆದರೆ ದೇವಸ್ಥಾನದ ಕಡೆಗೆ ದೃಷ್ಟಿಯನ್ನು ಕೂಡ ಹರಿಸದೆ ಸಾಗುವಾಗ ಅಲ್ಲೇ ರಸ್ತೆ ಬದಿಯಲ್ಲಿ ನಿಂತಿದ್ದ ಪೂಜಾರಿಗೆ ಆತನನ್ನು ಕಂಡು ಅಚ್ಚರಿ ಉಂಟಾಗಿ ಕೇಳಿದ: ‘ಹೇಗಿದ್ದಿಯಾ, ನಿನ್ನನ್ನು ಕಾಣದೆ ತುಂಬ ಸಮಯವಾಯ್ತಲ್ಲ. ದೇವಸ್ಥಾನದೊಳಗೆ ಬರಲು ನಿನ್ನ ದೇಹ-ಮನಸ್ಸು ಶುದ್ಧವಾಗಿರುವಂತೆ ತೋರುವುದಿಲ್ಲ………’ ಅದಕ್ಕೆ ಆ ಭಕ್ತ ನಿರಾಳವಾಗಿ ಹೇಳಿದ: ‘ಇನ್ನು ನನಗೆ ದೇವಸ್ಥಾನದ ಒಳಗೆ ಬರುವ ಅಗತ್ಯವೇ ಇಲ್ಲ. ನಿನ್ನೆಯಷ್ಟೇ ಕನಸಿನಲ್ಲಿ ನನಗೆ ದೇವರು ಪ್ರತ್ಯಕ್ಷನಾಗಿ ಕೇಳಿದ: ‘ನನ್ನನ್ನು ಕಾಣಲು ನೀನು ದೇವಸ್ಥಾನಕ್ಕೆ ಹೋಗಬೇಕೆಂದು ಆಸೆ ಪಡುತ್ತಿರುವೆ ತಾನೆ? ನಿನಗೋ ಹುಚ್ಚು, ಆ ದೇವಸ್ಥಾನದ ಪೂಜಾರಿ ಕಳೆದ ಹತ್ತು ವರ್ಷಗಳಿಂದ ನನ್ನನ್ನೇ ದೇವಸ್ಥಾನದೊಳಗೆ ಬರಲು ಬಿಡುತ್ತಿಲ್ಲ, ಇನ್ನು ನಿನ್ನ ಮಾತೇನು? ನಾನೇ ನಿನ್ನ ಹೃದಯದೊಳಗೆ ನೆಲೆಸಿರುವಾಗ ನಿನಗೆ ಈ ದೇವಸ್ಥಾನ ಬೇಕಾಗಿಲ್ಲ…….’

   

Related Articles

error: Content is protected !!