ಕುಂದಾಪುರ: “ಅಂತರಂಗದ ಪ್ರತಿಭೆ ಭವಿಷ್ಯತ್ತನ್ನು ಬೆಳಗಬೇಕು. ಸಂಘ ಚಟುವಟಿಕೆಗಳು ನಮ್ಮಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಬೆಳಗಲು ವೇದಿಕೆಯಾಗುತ್ತದೆ. ಕಲಿಕೆಯೊಂದಿಗೆ ನೈತಿಕ ಮತ್ತು ಮೌಲ್ಯ ಶಿಕ್ಷಣದೊಂದಿಗೆ ನಮ್ಮ ಬದುಕನ್ನು ಶ್ರೀಮಂತಗೊಳಿಸಿಕೊಳ್ಳಬೇಕು. ನಮ್ಮ ಅಭಿವೃದ್ಧಿ, ಆಸಕಿ,್ತ ಅನುಭವ, ಜ್ಞಾನ ಮತ್ತು ಜೀವನ ಪ್ರೀತಿಯನ್ನು ಅಳವಡಿಸಿಕೊಂಡು ಬದ್ಧತೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ನಮ್ಮದಾಗುತ್ತದೆ” ಎಂದು ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಗೌರಿ. ಆರ್. ಶ್ರೀಯಾನ್, ಅಧ್ಯಕ್ಷರು, ಕನ್ನಿಕಾ ಎಜುಕೇಶನ್ ಟ್ರಸ್ಟ್ ಕಂಡ್ಲೂರು ಇವರು ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ರಾಮ್ಸನ್ ಸರಕಾರಿ ಪ್ರೌಢಶಾಲೆ, ಕಂಡ್ಲೂರು ಇಲ್ಲಿ ಶ್ರೀ ಸಾಮ್ರಾಟ್ ಶೆಟ್ಟಿ, ಗೌರವಾಧ್ಯಕ್ಷರು, ಶಾಲಾ ಅಭಿವೃದ್ಧಿ ಸಮಿತಿ ಇವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
“ವಿದ್ಯಾರ್ಥಿ ಜೀವನ ಸರ್ವತೋಮುಖ ಬೆಳವಣಿಗೆಯ ಮೂಲಕ ಪರಿಪಕ್ವತೆ ಪಡೆಯುವ ಸುವರ್ಣ ಕಾಲ. ಸಂಘ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕ್ರಿಯಾಶೀಲರಾಗಬೇಕು. ಪರಿಶ್ರಮ ಮತ್ತು ಪ್ರಾಮಾಣಿಕತೆಯೊಂದಿಗೆ ರಾಷ್ಟ್ರಪ್ರೇಮ ಅಳವಡಿಸಿಕೊಂಡು ಸಂಸ್ಕಾರ, ಸಂಸ್ಕøತಿಯ ಪ್ರತಿನಿಧಿಗಳಾಗಬೇಕು” ಎಂದು ಮುಖ್ಯ ಅತಿಥಿ ಶ್ರೀಮತಿ ಸೀಮಾ ವಸಂತ್, ಖಜಾಂಚಿಗಳು, ಕನ್ನಿಕಾ ಎಜುಕೇಶನ್ ಟ್ರಸ್ಟ್ ಕಂಡ್ಲೂರು ಇವರು ಶಾಲಾ ಸಂಸತ್ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಶ್ರೀ ಸುರೇಶ್ ಭಟ್, ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಕರ್ತವ್ಯ ತಿಳಿಸಿದರು. ಶ್ರೀಮತಿ ರತ್ನ, ಸಹ ಶಿಕ್ಷಕರು ಇವರು ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ, ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ರಜನಿ ಎಸ್. ಹೆಗಡೆ ಸ್ವಾಗತಿಸಿ, ಸಹ ಶಿಕ್ಷಕ ಸಂತೋಷ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.