ನಾರದರು ಭಕ್ತಿ ವೇದಾಂತದ ಮಹಾ ಬೋಧಕರು. ಆದರೆ ನಾರದರಿಗೇ ಒಮ್ಮೆ ಭಗವಂತನು ಹೇಳುತ್ತಾನೆ: ‘ನಾನು ಸ್ವರ್ಗದಲ್ಲಿಯೂ ಇಲ್ಲ, ಯೋಗಿಯ ಹೃದಯದಲ್ಲಿಯೂ ಇಲ್ಲ. ಎಲ್ಲಿ ಭಕ್ತರು ನನ್ನನ್ನು ಭಜನೆ ಮಾಡುತ್ತಾರೋ ಅಲ್ಲಿ ನಾನು ಇರುವೆನು.’ ಭಕ್ತಿಯ ಮಹಿಮೆ ಮತ್ತು ಮಹತ್ವವೇನು ಎಂಬುದನ್ನು ಭಗವಂತನೇ ಈ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾನೆ. ದೇವರಲ್ಲಿ ಅನನ್ಯವಾದ ಭಕ್ತಿಯನ್ನು ಹೊಂದುವುದೆಂದರೆ ನಮ್ಮ ಹೃದಯ ಕಮಲದೊಳಗೇ ಆತನನ್ನು ಸದಾ ಕಾಣುವುದು ಎಂದು, ಪರಮಭಕ್ತನಾದ ಹನುಮಂತನು ತನ್ನೆರಡೂ ಕೈಗಳಿಂದ ತನ್ನ ಎದೆಯನ್ನು ಬಗೆದು ಅದರೊಳಗೆ ತನ್ನ ಒಡೆಯನಾದ ರಾಮನು ಸೀತೆಯೊಂದಿಗೆ ವಿರಾಜಮಾನನಾಗಿರುವುದನ್ನು ತೋರಿಸಿರುವ ಉದಾಹರಣೆಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ದೇವರು ಯಾವತ್ತೂ ತನ್ನ ಪರಮಭಕ್ತರ ಹೃದಯ ದೇಗುಲದಲ್ಲೇ ನೆಲೆಸಿರುತ್ತಾನೆ ಎನ್ನುವುದಕ್ಕೆ ಈ ರೀತಿಯಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ದೇವರನ್ನು ಸದಾ ನೆನೆಪಿನಲ್ಲಿ ಇಟ್ಟುಕೊಳ್ಳುವ ಅಭ್ಯಾಸಕ್ಕೆ ಸಂಗೀತವು ಬಹಳ ಸಹಕಾರಿ. ಮನುಷ್ಯನ ಮನಸ್ಸಿನ ಮೇಲೆ ಅದ್ಭುತವಾದ ಪ್ರಭಾವವನ್ನು ಮಾಡುವ ಶಕ್ತಿ ಸಂಗೀತಕ್ಕಿದೆ. ಮನಸ್ಸನ್ನು ಅದು ಕ್ಷಣಮಾತ್ರದಲ್ಲಿ ಜಾಗೃತಗೊಳಿಸುತ್ತದೆ. ಆತ್ಮಶಕ್ತಿಯನ್ನೂ ಹೆಚ್ಚಿಸುತ್ತದೆ. ಮನುಷ್ಯನ ಮೇಲೆ ಮಾತ್ರವಲ್ಲ, ಪ್ರಾಣಿಗಳು ಹಾಗೂ ಗಿಡಮರಗಳ ಮೇಲೂ ಸಂಗೀತದ ಪ್ರಭಾವವನ್ನು ಕಾಣಬಹುದಾಗಿದೆ. ಈ ವಿಚಾರವನ್ನು ವಿಜ್ಞಾನಿಗಳು ಕೂಡ ಕಂಡುಕೊಂಡಿದ್ದಾರೆ. ಸಂಗೀತದಿಂದ ದೀಪ ಉರಿಸುವ, ಮಳೆಯನ್ನು ಬರಿಸುವ ಚಮತ್ಕಾರಗಳನ್ನು ತಾನಸೇನರಂತಹ ಅಪ್ರತಿಮ ಸಂಗಿತಜ್ಞರು ಮಾಡಿದ್ದಾರೆ. ಹಾಗಾಗಿಯೇ ಭಜನೆಯು ದೇವರನ್ನು ಒಲಿಸಿಕೊಳ್ಳುವ ಸಂಗೀತ ಪ್ರಧಾನ ಮಾಧ್ಯಮವಾಗಿ ಎಲ್ಲೆಡೆ ಜನಪ್ರಿಯವಾಗಿದೆ. ನಿತ್ಯ ಸಂಜೆ ಭಜನೆಯನ್ನು ಹಾಡುವ ಪರಿಪಾಠವನ್ನು ಮಕ್ಕಳಲ್ಲಿ ಬೆಳೆಸುವ ಹೊಣೆ ಹಿರಿಯರದ್ದು. ದೇವರನ್ನು ನಮ್ಮ ಹೃದಯ ದೇಗುಲದೊಳಗಲ್ಲದೆ ಹೊರಗೆಲ್ಲೂ ನಾವು ಕಾಣೆವು.