ಉಡುಪಿ : ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕೇಸ್ ಗಳನ್ನು ಹಿಂಪಡೆಯುವ ಪ್ರಸ್ತಾಪದ ಬಗ್ಗೆ ಉತ್ಸುಕತೆ ತೋರುವ ರಾಜ್ಯ ಗೃಹ ಇಲಾಖೆ ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯ ಖಾಸಗಿ ವೀಡಿಯೋ ಚಿತ್ರೀಕರಣದ ಪ್ರಕರಣದ ತನಿಖೆಯ ಬಗ್ಗೆ ಯಾಕೆ ಮಹತ್ವ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪ್ರಶ್ನಿಸಿದ್ದಾರೆ.
ಈ ಗಂಭೀರ ಪ್ರಕರಣವು ರಾಜ್ಯದೆಲ್ಲೆಡೆ ಕೋಲಾಹಲ ಸೃಷ್ಟಿಸಿದ್ದು, ಸದ್ರಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಾತ್ಮಕ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಮೂರು ಮಂದಿ ತಪ್ಪಿತಸ್ಥ ವಿದ್ಯಾರ್ಥಿನಿಯರಾದ ಶಬನಾಝ್, ಅಲ್ಫೀಯಾ ಮತ್ತು ಅಲೀಮಾ ತಪ್ಪೊಪ್ಪಿಗೆ ಮೂಲಕ ವೀಡಿಯೋವನ್ನು ಡಿಲೀಟ್ ಮಾಡಿರುವುದು ಕಾನೂನು ಬಾಹೀರವಾಗಿದೆ. ಸದ್ರಿ ವೀಡಿಯೋವನ್ನು ಯಾರಿಗಾದರೂ ಫಾರ್ವರ್ಡ್ ಮಾಡಲಾಗಿದೆಯೋ ಎಂಬ ಬಗ್ಗೆಯೂ ತನಿಖೆಯಾಗಬೇಕಿದೆ. ಸುಶಿಕ್ಷಿತ ಶಾಂತಿಪ್ರಿಯ ಜನತೆಯ ನಾಡು ಉಡುಪಿಯಲ್ಲಿ ಇಂತಹ ಅನಪೇಕ್ಷಿತ ಕುಕೃತ್ಯ ನಡೆದಿರುವುದು ಜಿಲ್ಲೆಯ ಇತಿಹಾಸದಲ್ಲೊಂದು ಕಪ್ಪು ಚುಕ್ಕೆಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಜಿಹಾದಿ ಮನಸ್ಥಿತಿಯ ಸಮಾಜಘಾತುಕ ಮತಾಂಧ ಶಕ್ತಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಜಿಲ್ಲೆಯಲ್ಲಿ ಇಂತಹ ಗಂಭೀರ ಪ್ರಕರಣ ದಾಖಲಾದರೂ ಜಿಲ್ಲೆಯ ಮಹಿಳಾ ಉಸ್ತುವಾರಿ ಸಚಿವರು ತಪ್ಪಿತಸ್ಥರ ವಿರುದ್ಧ ಕಾನೂನಾತ್ಮಕ ತುರ್ತು ಕ್ರಮ ಜರುಗಿಸಲು ಮುಂದಾಗದೇ ಇರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ತಕ್ಷಣ ಸ್ವಯಂ ಪ್ರೇರಿತ ದೂರು ದಾಖಲಿಸದ ಪೊಲೀಸರು, ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದ ರಶ್ಮಿ ಸಾಮಂತ್ ರವರ ಮನೆಗೆ ಹೋಗಿ ಅವರ ಬಗ್ಗೆ ವಿಚಾರಿಸಿರುವುದು ವಿಪರ್ಯಾಸ.
ಪ್ರಕರಣದ ತನಿಖೆಗೆ ಎಲ್ಲೆಡೆ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ, ಜು.18ರಂದು ನಡೆದ ಘಟನೆಯ ಬಗ್ಗೆ ಜು.26ರಂದು ಸ್ವಯಂಪ್ರೇರಿತ ದೂರು ದಾಖಲಿಸಿರುವ ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ಸಮಗ್ರ ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ನಡೆಸುವ ಮೂಲಕ ಸಂತ್ರಸ್ತ ವಿದ್ಯಾರ್ಥಿನಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ನಯನಾ ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ