ಕೋಟೇಶ್ವರ : ದೆಹಲಿಯ ಕಿಯೋದಲ್ಲಿ ನಡೆದ ಅಖಿಲ ಭಾರತ ಸಬ್ ಜೂನಿಯರ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ .ಝಾರ, ಸಬ್ ಜೂನಿಯರ್ 13 ವಯೋಮಿತಿಯ 52 ಕೆಜಿ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಪಡೆದರೆ, ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ .ಸಾನಿಧ್ಯ ಸಂತೋಷ್ ನಾಯ್ಕ್, ಸಬ್ ಜೂನಿಯರ್ 11 ವಯೋಮಿತಿಯ 45 ಕೆಜಿ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಇವರಿಬ್ಬರೂ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಯನ್ನು ಗುರುತಿಸಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕರು ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಲ್ಲಿ ಅವಿರತ ಶ್ರಮ ವಹಿಸಿ ಮಕ್ಕಳಿಗೆ ನಿರಂತರವಾಗಿ ತರಬೇತಿ ನೀಡುತ್ತಿರುವ ಕುಂದಾಪುರದ ಕೆ.ಡಿ.ಎಫ್. ಕರಾಟೆ ಸಂಸ್ಥೆಯ ಶಿಹಾನ್ ಸಂದೀಪ್ ವಿ.ಕೆ. ಇವರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ.ಅನುಪಮಾ ಎಸ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಈ ಸಾಧನೆ ನಿಜಕ್ಕೂ ಶಾಲೆಗೆ ಹೆಮ್ಮೆ ತರುವ ವಿಷಯ,ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ ಅದನ್ನು ಗುರುತಿಸುವ ಕೆಲಸ ಶಾಲಾ ಶಿಕ್ಷಕರು ಮತ್ತು ಪೋಷಕರಿಂದ ಆಗಬೇಕು ಹಾಗೂ ಇವರಿಬ್ಬರ ಯಶಸ್ಸು ಉಳಿದ ಮಕ್ಕಳಿಗೆ ಸ್ಫೂರ್ತಿ ಆಗಲಿ ಮುಂದಿನ ದಿನಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಸುಮಲತಾ ನಿರೂಪಿಸಿ, ವಂದಿಸಿದರು.