ಕೋಟ : ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳೀಯ ನಿವಾಸಿ ನಾರಾಯಣ ಮರಕಾಲ ಹಾಗೂ ಪದ್ದು ಮರಕಾಲ್ತಿ ಅವರ ಪುತ್ರ ಸಂದೀಪ್ ಮರಕಾಲ (36) ಅವರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತ ಸಂದೀಪ್ ಅವರು ಸ್ಥಳೀಯ ಜನತಾ ಫಿಶ್ ಮಿಲ್‌ನಲ್ಲಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಪೇಟೆಗೆ ತೆರಳಿ ಹಂದಟ್ಟು ಅಡ್ಡ ರಸ್ತೆಯ ಮಾರ್ಗವಾಗಿ ಕೋಟತಟ್ಟು ಪಡುಕರೆಯಲ್ಲಿದ್ದ ತಮ್ಮ ಮನೆಗೆ ಹಿಂದಿರುಗುತ್ತಿದ್ದರು.
ಈ ಸಂದರ್ಭದಲ್ಲಿ ಮಣೂರು ಪಡುಕರೆಯಿಂದ ಪಾರಂಪಳ್ಳಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರು, ಸಂದೀಪ್ ಅವರ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಬೈಕನ್ನು ಸುಮಾರು 30 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಇದರ ಪರಿಣಾಮವಾಗಿ ಸಂದೀಪ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರ ಸಹಕಾರದೊಂದಿಗೆ ಜೀವನ್ ಮಿತ್ರ ಆಂಬುಲೆನ್ಸ್ ಚಾಲಕ ಕಿಶೋರ್ ಶೆಟ್ಟಿ ಅವರು ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಪರೀಕ್ಷಿಸಿದ ವೈದ್ಯರು ಸಂದೀಪ್ ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೋಟ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆದಿದೆ.

