Home » ಲೈವ್ ವರ್ಚುವಲ್ ರ‍್ಯಾಲಿ
 

ಲೈವ್ ವರ್ಚುವಲ್ ರ‍್ಯಾಲಿ

by Kundapur Xpress
Spread the love

ಬೆಂಗಳೂರು: ಬಿಜೆಪಿ ಕಾರ್ಯಕರ್ತರಾಗುವ ದ್ವಿಗುಣ ಗೌರವದಿಂದ  ಜವಾಬ್ದಾರಿಯೂ ಹೆಚ್ಚಾಗಿದೆ ಬಸವಣ್ಣನವರ ನಾಡು ನಿಮ್ಮದು ಗರಿಷ್ಠ ದಾಖಲೆಯ ಸೀಟುಗಳಿಂದ ಬಿಜೆಪಿ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು.
‘ಲೈವ್ ವರ್ಚುವಲ್ ರ‍್ಯಾಲಿ’ಯಲ್ಲಿ ಮಾತನಾಡಿದ ಅವರು, ಬೂತ್ ಗೆಲುವು ರಾಜ್ಯದ ಗೆಲುವಿಗೆ ಪೂರಕ. ಮತ್ತೆ 2 ದಿನಗಳಲ್ಲಿ ಕರ್ನಾಟಕದ ಜನರ ದರ್ಶನಕ್ಕಾಗಿ, ಆಶೀರ್ವಾದ ಪಡೆಯಲು ಬರಲಿದ್ದೇನೆ.
ಕರ್ನಾಟಕದ ಎಲ್ಲಿ ಹೋದರೂ ಜನರ ಉತ್ಸಾಹ ಕಾಣುತ್ತಿದೆ. ಕರ್ನಾಟಕಕ್ಕೆ ಬಂದ ನಾಯಕರು, ಮುಖಂಡರು ಜನರ ವಿಶ್ವಾಸದ ಮಾತನಾಡುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ ಬಿಜೆಪಿಗೆ ಅಭಿನಂದನೆಗಳು. ಸಂಘಟನೆಯ ಶಕ್ತಿ ಅನಾವರಣಗೊಂಡಿದೆ ಎಂದರು.

ಹೆಚ್ಚು ಮತದಿಂದ ಗೆಲುವಿಗೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯನ್ನು ವಿಭಿನ್ನ ಪಕ್ಷವಾಗಿ ಗೆಲ್ಲಿಸಿ. ಬೂತ್‍ಗಳಲ್ಲಿ 10 ಮಹಿಳಾ, 10 ಪುರುಷ ಕಾರ್ಯಕರ್ತರನ್ನು ಜೊತೆಗೂಡಿಸಿ. ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಿ. ಹಿರಿಯರಿಗೆ ಗೌರವ ಸಲ್ಲಿಸಿ. ಕಿರಿಯರನ್ನು ಪ್ರೀತಿಯಿಂದ ಮಾತನಾಡಿಸಿ. ಬೂತ್ ಗೆಲುವು ಎಂದರೆ ಕುಟುಂಬಗಳ ಜೊತೆ ಮಾತುಕತೆ ಮತ್ತು ಜನರ ಒಲವಿನ ಗೆಲುವಾಗಲಿ ಎಂದು ಆಶಿಸಿದರು.

25 ವರ್ಷಗಳಲ್ಲಿ ಬಡತನಮುಕ್ತ, ವಿಕಸಿತ ದೇಶ ನಮ್ಮ ಗುರಿ. ಕೇವಲ ಅಧಿಕಾರ ಪಡೆಯುವುದಷ್ಟೇ ನಮ್ಮ ವಿರೋಧಿಗಳ ಗುರಿ ಎಂದು ತಿಳಿಸಿದರು. ಕರ್ನಾಟಕದಲ್ಲಿ ಬೆಂಗಳೂರಿನಂಥ ಅನೇಕ ಸ್ಟಾರ್ಟಪ್ ಹಬ್‍ಗಳ ನಿರ್ಮಾಣ ಆಗಲಿ. ಪೂರ್ಣ ಬಹುಮತದ ಸ್ಥಿರ ಸರಕಾರಕ್ಕಾಗಿ ಮತ ಕೇಳಬೇಕು. ದೆಹಲಿಯಲ್ಲಿ 9 ವರ್ಷಗಳಿಂದ ಸ್ಥಿರ ಸರಕಾರದಿಂದ ಆದ ಲಾಭ ಮತ್ತು ಅಸ್ಥಿರ ಸರಕಾರದ ವೈಫಲ್ಯಗಳನ್ನು ಅನಾವರಣಗೊಳಿಸಿ ಎಂದು ತಿಳಿಸಿದರು.

ಡಬಲ್ ಎಂಜಿನ್ ಸರಕಾರ ಎಂದರೆ ವಿಕಾಸದ ಹಾದಿ. ಡಬಲ್ ಎಂಜಿನ್ ಸರಕಾರ ಇದ್ದಾಗ ಬಡವರ ಕಲ್ಯಾಣದ ಕಾರ್ಯಕ್ರಮಗಳು ಬೇಗನೆ ಜನರನ್ನು ತಲುಪುತ್ತವೆ. ವಿಪಕ್ಷದ ಸರಕಾರ ಇದ್ದಾಗ ಕೇಂದ್ರದ ಯೋಜನೆಗಳು ವಿಫಲವಾಗುತ್ತವೆ. ಯೋಜನೆಯ ಹೆಸರು ಬದಲಿಸುವುದು, ಯೋಜನೆ ವಿಫಲ ಆಗುವಂತೆ ನೋಡಿಕೊಳ್ಳುತ್ತಾರೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್‍ನಡಿ ಪ್ರತಿ ಅರ್ಹ ರೈತರಿಗೆ ಒಟ್ಟು 10 ಸಾವಿರ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಗರಿಷ್ಠ ಲಾಭ ಲಭಿಸಿದೆ. ವಿಕಾಸದ ವೇಗ ವರ್ಧನೆಗೆ ಬಿಜೆಪಿ ಗೆಲ್ಲಬೇಕಿದೆ ಎಂದು ನುಡಿದರು.
ಸ್ವಾಸ್ಥ್ಯ ಸೇವೆಯಲ್ಲಿ ಯುಪಿಎ ಸರಕಾರದ ನಿಧಾನಗತಿಯಿಂದ ಜನರಿಗೆ ಸಮಸ್ಯೆ ಆಗಿತ್ತು. ಏಮ್ಸ್ ಸಂಖ್ಯೆ ಗಮನಾರ್ಹ ಹೆಚ್ಚಳ (20ಕ್ಕೆ ಏರಿಕೆ), ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ 600ಕ್ಕೆ ಏರಿದೆ. ಭ್ರಷ್ಟಾಚಾರ ದೂರವಿಡಲು ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ. 2014ರ ಬಳಿಕ ಭ್ರಷ್ಟಾಚಾರ ದೂರವಿಡಲು ಜನ್‍ಧನ್, ಆಧಾರ್ ಮೂಲಕ ಡಿಬಿಟಿಯಡಿ ಹಣ ವರ್ಗಾವಣೆ ಆಗುತ್ತಿದೆ. ಭ್ರಷ್ಟಾಚಾರ ತಪ್ಪಿಸಿದ್ದೇವೆ ಎಂದು ವಿವರಿಸಿದರು.

ಶಿವಮೊಗ್ಗದ ವಿರೂಪಾಕ್ಷಪ್ಪ, ಚಿತ್ರದುರ್ಗದ ಫಕೀರಪ್ಪ, ಚಂದ್ರಶೇಖರ್ ವಿಜಯನಗರ, ದಕ್ಷಿಣ ಕನ್ನಡದ ಅರುಣ್ ಸೇಠ್, ಬೆಂಗಳೂರಿನ ಬಿ.ಆರ್.ಯೋಗೀಶ್ ಅವರ ಪ್ರಶ್ನೆಗಳಿಗೆ ಪ್ರಧಾನಿಯವರು ಉತ್ತರ ನೀಡಿದರು.

ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮಂಗಳೂರು ದಕ್ಷಿಣ ಮಂಡಲದ ಅದ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ, ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಿರಿಯ ಮುಖಂಡರಾದ ಮೋನಪ್ಪ ಭಂಡಾರಿ ಅವರು ಉಪಸ್ಥಿತರಿದ್ದರು.

 

 

Related Articles

error: Content is protected !!