Home » ಬಿಲ್ ಪಾವತಿಗೆ ಲಂಚ ಬೇಡಿಕೆ : ಲೋಕಾಯುಕ್ತ ಪೊಲೀಸರ ಬಲೆಗೆ
 

ಬಿಲ್ ಪಾವತಿಗೆ ಲಂಚ ಬೇಡಿಕೆ : ಲೋಕಾಯುಕ್ತ ಪೊಲೀಸರ ಬಲೆಗೆ

by Kundapur Xpress
Spread the love

ಮಂಗಳೂರು: ಸರ್ಕಾರಿ ಕಾಮಗಾರಿಯ ಬಿಲ್ ಪಾವತಿಗೆ ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ವಿದ್ಯುತ್ ಉಪವಿಭಾಗ, ಲೋಕೋಪಯೋಗಿ ಇಲಾಖೆ, ಮಂಗಳೂರು ಕಚೇರಿಯ ಎಸ್‌ಡಿಎ ಸಂಪತ್ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ.

ಫಿರ್ಯಾದುದಾರರು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದು, 2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಗಳ ಬಿಲ್ ಪಾವತಿಗಾಗಿ ಶೇ.4ರಂತೆ ಒಟ್ಟು ರೂ.22,600/- ಲಂಚ ನೀಡಬೇಕೆಂದು ಸಂಪತ್ ಅವರು ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.

ಈ ಸಂಬಂಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಸಂಪತ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸೋಮವಾರ ಫಿರ್ಯಾದುದಾರರಿಂದ ರೂ.22,600/- (ಇಪ್ಪತ್ತೆರಡು ಸಾವಿರ ಆರು ನೂರು) ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸಂಪತ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ.

ಈ ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಸುರೇಶ್ ಕುಮಾರ್ ಪಿ., ಡಾ. ಗಾನಾ ಪಿ. ಕುಮಾರ್ ಹಾಗೂ ಪಿಐ ಭಾರತಿ ಜಿ ಅವರ ಉಸ್ತುವಾರಿಯಲ್ಲಿ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ, ಗಂಗಣ್ಣ, ಮಹಾದೇವ, ಪವಿತ್ರ, ಲಕ್ಷ್ಮೀ, ರವಿ ಪವಾರ್ ಮತ್ತು ನವೀನ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Related Articles

error: Content is protected !!