ಮಲ್ಪೆ: ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ, ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ವಂಚನೆ ಮಾಡುವ ಆರೋಪದಲ್ಲಿ 10 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.ದಿನಾಂಕ 11 ಅಕ್ಟೋಬರ್ 2024 ರಂದು, ಮಲ್ಪೆ ಪೊಲೀಸ್ ಠಾಣೆಯ PSI ಪ್ರವೀಣ್ ಕುಮಾರ್ ಆರ್ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಸಂಜೆ 7 ಗಂಟೆ ಸುಮಾರಿಗೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ, 7 ಮಂದಿ ಅನುಮಾನಾಸ್ಪದವಾಗಿ ಲಗೇಜ್ ಸಮೇತ ಸಂಚರಿಸುತ್ತಿರುವುದು ಗಮನಕ್ಕೆ ಬಂತು.
ವಿಚಾರಣೆ ವೇಳೆ, ಆರೋಪಿತರು ಯಾವುದೇ ಅನುಮತಿ ದಾಖಲೆಗಳಿಲ್ಲದೆ, ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ, ಬಾಂಗ್ಲಾದೇಶದಿಂದ ಉಡುಪಿ ಕಡೆ ಬಂದಿರುವುದು ಬಹಿರಂಗವಾಯಿತು. ಅವರನ್ನು ವಶಕ್ಕೆ ಪಡೆಯುವ ಮೂಲಕ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ, ಉಳಿದ 3 ಮಂದಿಯನ್ನೂ ಗುರುತು ಮಾಡಿ ಬಂಧಿಸಲಾಯಿತು. ಒಟ್ಟಾರೆಯಾಗಿ 10 ಮಂದಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ, ಮಾನ್ಯ ಉಡುಪಿ Prl Sr Civil Judge & CJM ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಯಿತು.
ವಿಚಾರಣೆ ನಡೆದ ನಂತರ, ಡಿಸೆಂಬರ್ 8, 2025 ರಂದು ನ್ಯಾಯಾಲಯವು 10 ಮಂದಿಗೂ 2 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಕ್ರಮ ವಲಸೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪಕ್ಕೆ ಶಿಕ್ಷೆ ವಿಧಿಸಿರುವ ಈ ತೀರ್ಪು, ಇಂತಹ ಪ್ರಕರಣಗಳಿಗೆ ಗಂಭೀರ ಎಚ್ಚರಿಕೆಯಾಗಿದೆ.

