Home » ಕಂಡ್ಲರೂ ಬ್ರಿಡ್ಜ್‌ ಬಳಿ ಅಕ್ರಮ ಮರಳು ದಂಧೆ
 

ಕಂಡ್ಲರೂ ಬ್ರಿಡ್ಜ್‌ ಬಳಿ ಅಕ್ರಮ ಮರಳು ದಂಧೆ

by Kundapur Xpress
Spread the love

ಕುಂದಾಪುರ : ಕುಂದಾಪುರ ವೃತ್ತ ವ್ಯಾಪ್ತಿಯ ಕಂಡ್ಲೂರು ಬ್ರಿಡ್ಜ್ ಸಮೀಪ ವರಾಹಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದು, 11 ಮಂದಿಯನ್ನು ಬಂಧಿಸಿ ನಾಲ್ಕು ದೋಣಿಗಳು ಹಾಗೂ ಸುಮಾರು 3½ ಯುನಿಟ್ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕುಂದಾಪುರ ವೃತ್ತದ ಪೊಲೀಸ್ ನಿರೀಕ್ಷಕರಾದ ಸಂತೋಷ ಎ. ಕಾಯ್ಕಿಣಿ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು, ನದಿಯಲ್ಲಿ ದೋಣಿಗಳಲ್ಲಿ ಮರಳು ತುಂಬುತ್ತಿರುವುದು ಕಂಡುಬಂದಿದೆ.

ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ ಆರೋಪಿಗಳು ದೋಣಿಗಳನ್ನು ಪೊದೆಗಳ ಕಡೆಗೆ ತೆಗೆದುಕೊಂಡು ಹೋಗಿ ಅಡಗಿಕೊಂಡಿದ್ದರು. ಬಳಿಕ ಸಿಬ್ಬಂದಿಗಳ ನೆರವಿನಿಂದ ನಾಲ್ಕು ದೋಣಿಗಳನ್ನು ಪತ್ತೆಹಚ್ಚಿ, ಅದರಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.

ವಿಚಾರಣೆ ವೇಳೆ ಆರೋಪಿಗಳು ಹಳ್ನಾಡು KRIDL ಮರಳು ಧಕ್ಕೆಯ ದಿನಗೂಲಿ ಕಾರ್ಮಿಕರಾಗಿದ್ದು, ಉತ್ತಮ ಗುಣಮಟ್ಟದ ಮರಳು ತರಲು ಧಕ್ಕೆಯ ಮಾಲಿಕ ಸುನಿಲ್ ಶೆಟ್ಟಿ ಹಾಗೂ ಸೂಪರ್ ವೈಸರ್ ಅಜ್ಮಲ್ ಹೆಚ್ಚಿನ ಹಣ ನೀಡುವುದಾಗಿ ಸೂಚಿಸಿದ್ದರಿಂದ ಜಿಯೋ ಪೆನ್ಸಿಂಗ್ ಬೌಂಡರಿಯ ಹೊರಗೆ ಹೋಗಿ ರಾತ್ರಿ ವೇಳೆಯಲ್ಲಿ ಮರಳು ತೆಗೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತರಾಗಿ ರಾಮಶಂಕರ ರಾಜಬೀರ್ (35), ರಾಮಕುಮಾರ್ (40), ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ (30), ಕಮಲೇಶ ನಿಸಾದ್ (35), ಸಂತೋಷ ನಿಸಾದ್ (23), ಓಂ ಪ್ರಕಾಶ ರಾಜಬರ್ (34), ರಮೇಶ ರಾಜಬರ್ (35) ಸೇರಿದಂತೆ 11 ಮಂದಿ ಸೇರಿದ್ದಾರೆ.

ದಾಳಿಯ ವೇಳೆ ನಾಲ್ಕು ಹಳದಿ ಬಣ್ಣದ ದೋಣಿಗಳು (ಪ್ರತಿ ದೋಣಿ ಅಂದಾಜು ಮೌಲ್ಯ ರೂ.75,000), ಸುಮಾರು 3½ ಯುನಿಟ್ ಮರಳು (ಮೌಲ್ಯ ರೂ.4,500) ಹಾಗೂ ನಾಲ್ಕು ಬಿದಿರಿನ ತೊಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

error: Content is protected !!