ಮಂಗಳೂರು: ಕರಾವಳಿಯಲ್ಲಿನ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಬಾಲಕೃಷ್ಣ ಗಟ್ಟಿ (83) ಅವರು ಶುಕ್ರವಾರ (ಜೂ.12) ನಿಧನರಾದರು.ಮೂಲತಃ ಕುಂಬಳೆಯವರಾದ ಬಾಲಕೃಷ್ಣ ಗಟ್ಟಿ ಅವರು ಕುಂಬಳೆಯ ಹಿರಿಯ ಸಾಮಾಜಿಕ ಧುರೀಣ ದಿವಂಗತ ಮಹಾಲಿಂಗ ಗಟ್ಟಿ ಅವರ ಪುತ್ರ.
ಬಂಟ್ವಾಳ ಎಸ್.ವಿ.ಎಸ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು 1998-2002 ಅವಧಿಯಲ್ಲಿ ಜನವಾಹಿನಿ ದೈನಿಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ವೃತ್ತಿಯಿಂದ ನಿವೃತ್ತರಾದ ಬಳಿಕ ಅವರು ಮಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಒಬ್ಬಳು ಪುತ್ರಿ ಮತ್ತು ಬಂಧು ಬಳಗವನ್ನು ಆಗಲಿದ್ದಾರೆ.
ನೇತ್ರಾವತಿ ವಾರ್ತೆ ದೈನಿಕವನ್ನು ಪ್ರಾರಂಭಿಸಿ ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಜನವಾಹಿನಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದ್ದ ಬಾಲಕೃಷ್ಣ ಗಟ್ಟಿ ಸರಳ ನಿಷ್ಠುರ ಬರೆವಣಿಗೆ ಮೂಲಕ ಪತ್ರಿಕಾರಂಗದಲ್ಲಿ ಗುರುತಿಸಲ್ಪಟ್ಟಿದ್ದರು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಸ್ಥಾಪನೆ ಮಾಡಿ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2024 ನವೆಂಬರ 12ರಂದು ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

