ಕುಂದಾಪುರ: ಶ್ರೀ ಮೈಲಾರೇಶ್ವರ ಯುವಕ ಮಂಡಲದ ಹಿರಿಯ ಸದಸ್ಯ, ಸರ್ವಧರ್ಮ ಸಮನ್ವಯದ ಹರಿಕಾರನೆಂದೆ ಗುರುತಿಸಿಕೊಂಡಿದ್ದ, ಪ್ರಥಮ ದರ್ಜೆ ಗುತ್ತಿಗೆದಾರರಾದ ಪಿ. ಎಮ್. ಇಬ್ರಾಹಿಂ ಸಾಹೇಬ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಸಂತಾಪಸೂಚಕ ಸಭೆಯು ಶ್ರೀ ಮೈಲಾರೇಶ್ವರ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಯುವಕ ಮಂಡಲದ ಗೌರವಾಧ್ಯಕ್ಷ ಸುಧೀರ್ ಕೃಷ್ಣ ಮಾತನಾಡಿ, ಪಿ ಎಮ್. ಇಬ್ರಾಹಿಂ ಸಾಹೇಬ್ ಅವರು ಶ್ರೀ ಮೈಲಾರೇಶ್ವರ ದೇವಸ್ಥಾನ ಹಾಗೂ ಯುವಕ ಮಂಡಲಕ್ಕೆ ನೀಡಿದ ಅಪಾರ ಕೊಡುಗೆಗಳು ಮತ್ತು ಅವರ ಸಮಾಜಮುಖಿ ಕಾರ್ಯಗಳ ಕುರಿತು ಕೊಂಡಾಡಿದರು.
ಯುವಕ ಮಂಡಲದ ಅಧ್ಯಕ್ಷರಾದ ಜಿ. ಆರ್. ಪ್ರಕಾಶ್ ರಾವ್ ಮಾತನಾಡಿ ಇಬ್ರಾಹಿಂ ಸಾಹೇಬರ ಮೇರು ವ್ಯಕ್ತಿತ್ವ ಹಾಗೂ ಸರ್ವ ಧರ್ಮಗಳನ್ನು ಸಮನಾಗಿ ಗೌರವಿಸುವ ಗುಣ ನಮಗೆಲ್ಲರಿಗೂ ಅದರ್ಶವಾಗಬೇಕೆಂದು ಮತ್ತು ಅವರ ಅಗಲಿಕೆಯು ಯುವಕ ಮಂಡಲಕ್ಕೆ ತುಂಬಲಾರದ ನಷ್ಟವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಸದಸ್ಯರು ಪಿ. ಎಂ ಇಬ್ರಾಹಿಂ ಸಾಹೇಬರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಆರಾಧ್ಯ ದೇವರಾದ ಶ್ರೀ ಮೈಲಾರೆಶ್ವರನಲ್ಲಿ ಪ್ರಾರ್ಥಿಸಿದರು