ಹೆಬ್ರಿ : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಹಾಲಿನ ಶೇಖರಣೆಯು ಕಡಿಮೆಯಾಗಿದ್ದು, ಗ್ರಾಹಕರ ಬೇಡಿಕೆಯಂತೆ ಹಾಲಿನ ಪೂರೈಕೆ ಯು ಕಷ್ಟ ಸಾಧ್ಯವಾಗಿದೆ. 2023 _24 ನೇ ಸಾಲಿನಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ ಈ ವರ್ಷ ಜೂನ್ ೦1 ರಿಂದ ” ಮಿಶ್ರತಳಿ ಹೆಣ್ಣು ಕರುಗಳ ಸಾಕಾಣಿಕ ಯೋಜನೆ” ಯನ್ನು ಜಾರಿ ತರಲಾಗಿದ್ದು, ಈ ವರ್ಷ 5,000 ಹೆಣ್ಣು ಕರುಗಳಿಗೆ ವಾರ್ಷಿಕ ಸುಮಾರು 1.5 ಕೋಟಿ ರೂಪಾಯಿ ಅನುದಾನದ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಈ ಯೋಜನೆಯಲ್ಲಿ 11 ದಿನದ ಉತ್ತಮ ಮಿಶ್ರತಳಿ ಹೆಣ್ಣು ಕರು ಅಥವಾ ಉತ್ತಮ ಗುಣಮಟ್ಟದ ದೇಶಿ ಹೆಣ್ಣು ಕರುವನ್ನು (ಸಾಹಿ ವಾಲ್_ ಗಿರ್) ಸಂಘದ ವ್ಯಾಪ್ತಿಯಲ್ಲಿ ಸಂಘದ ಸಿಬ್ಬಂದಿಯವರು ಗುರುತಿಸಿ, ಅದನ್ನು ಒಕ್ಕೂಟದ ಪಶುವೈದ್ಯಾಧಿಕಾರಿಗಳ ಶಿಫಾರಸಿನಂತೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಹೆಣ್ಣು ಕರುಗಳಿಗೆ ನಿಯಮಿತವಾದ ಆರೋಗ್ಯ ತಪಾಸಣೆ, ನಂದಿನಿ ಕರು ಆಹಾರ, ಜಂತುಹುಳದ ಔಷಧ, ಲವಣ ಮಿಶ್ರಣವನ್ನು ಅನುದಾನದ ರೂಪದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ವಿವರ ನೀಡಿದರು.
ಕರುಗಳನ್ನು ಉತ್ತಮ ರೀತಿಯಲ್ಲಿ ಸಾಕಿ ,ನಿಗದಿತ ಅವಧಿಯೊಳಗೆ ಗರ್ಭ ಧರಿಸಿ(ಮಿಶ್ರತಳಿ 27 ತಿಂಗಳೊಳಗೆ ಹಾಗೂ ದೇಶಿ ತಳಿಗಳಾಗಿದ್ದಲ್ಲಿ ಗರಿಷ್ಠ 36 ತಿಂಗಳ ಒಳಗಾಗಿ ) ,ರಾಸು ಕರು ಹಾಕಿದ್ದಲ್ಲಿ ಮತ್ತು ಫಲಾನುಭವಿಯು ಸಂಘಕ್ಕೆ ಹಾಲು ಪೂರೈಕೆ ಮಾಡಲು ಪ್ರಾರಂಭಿಸಿದ ನಂತರ ಒಕ್ಕೂಟದ ವತಿಯಿಂದ ರೂ.1000/- ವಿಶೇಷ ಪ್ರೋತ್ಸಾಹ ಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಎಂದು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ತಿಳಿಸಿದರು.ಅವರು ಜೂನ್ 19, ಸೋಮವಾರದಂದು ಹೆಬ್ರಿ ಹಾಲು ಉತ್ಪಾದಕರ ಸಹಕಾರಿಸಂಘದ ಆವರಣದಲ್ಲಿ ” ಮಿಶ್ರತಳಿ ಹೆಣ್ಣು ಕರೆಗಳ ಸಾಕಾಣಿಕ ಯೋಜನೆ”ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸಾಧು ಹೆಗಡೆಯವರು ಅಧ್ಯಕ್ಷತೆ ವಹಿಸಿದ್ದು, ಫಲಾನುಭವಿ ರೈತರಿಗೆ ” ಕರುಸಾಕಾಣಿಕ ಕಾರ್ಡ್” ವಿತರಿಸಿದರು.ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಧನಂಜಯ ಕರು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿ, ಯೋಜನೆಯಲ್ಲಿ ನೋಂದಾವಣೆ ಗೊಂಡ ಕರುಗಳಿಗೆ ಕಿವಿಗೆ ಸಾಂಕೇತಿಕವಾಗಿ ಕಿವಿಯೋಲೆ ಹಾಕಿದರು.ವಿಸ್ತರಣಾಧಿಕಾರಿ ಮಂಜುನಾಥ್ ಪ್ರಾಸ್ತವಿಕ ಮಾತಾಗಳನ್ನಾಡಿದರು. ಸಂಘದ ಕಾರ್ಯದರ್ಶಿ ದಿವ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸಂಘದ ನಿರ್ದೇಶಕರು, ಸದಸ್ಯರು, ಯೋಜನೆಯ ಫಲಾನುಭವಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು