ಸ್ವಾಮಿ ಫ್ರೆಂಡ್ಸ್ ಅಂಬಲಪಾಡಿ ಇದರ ನೇತೃತ್ವದಲ್ಲಿ ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಉಜ್ವಲ ಸಂಜೀವಿನಿ ಒಕ್ಕೂಟ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಆಟಿ ತಿಂಗಳ ಗ್ರಾಮೀಣ ಕ್ರೀಡಾ ಕೂಟ ‘ಕೆಸರ್ದ ಗೊಬ್ಬು-2023’ ಅಂಬಲಪಾಡಿಯ ಬಂಕೇರಕಟ್ಟ ಆಚಾರಿಗುಂಡಿ ದ್ವಾಲಮಾರ್ ಗದ್ದೆಯಲ್ಲಿ ಸಂಪನ್ನಗೊಂಡಿತು.
ಕೆಸರು ಗದ್ದೆ ಕ್ರೀಡಾ ಕೂಟ ಕೆಸರ್ದ ಗೊಬ್ಬು-2023ನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ತೆಂಗಿನ ತೆನೆ ಅರಳಿಸಿ, ಗದ್ದೆಗೆ ಹಾಲೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಚಿಕ್ಕಂದಿನಲ್ಲಿ ಮನೆ ಮಂದಿಯೊಂದಿಗೆ ಗದ್ದೆಯಲ್ಲಿ ಕೃಷಿ ಚಟುವಟಿಕೆಗೆ ಓಡಾಡಿದ ನೆನಪು ಮುರುಕಳಿಸುತ್ತಿದೆ. ಇಂದು ಗ್ರಾಮೀಣ ಪ್ರದೇಶದಲ್ಲಿ ಬೇಸಾಯ ವೃತ್ತಿ ಕುಂಠಿತವಾಗಿರುವ ಹಂತದಲ್ಲಿ ಹಡಿಲು ಭೂಮಿ ಕೃಷಿಯಲ್ಲಿ ತೊಡಸಿಕೊಳ್ಳುವ ಜೊತೆಗೆ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ‘ಕೆಸರ್ದ ಗೊಬ್ಬು’ ಆಯೋಜಿಸಿರುವುದು ಪ್ರಶಂಸನೀಯ. ಇಂತಹ ಮಾದರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿರುವ ಸ್ವಾಮಿ ಫ್ರೆಂಡ್ಸ್ ತಂಡದ ಸರ್ವ ಸದಸ್ಯರು ಹಾಗೂ ಸಹರಿಸಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂಸ್ಥೆಯ ಮೂಲಕ ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯ ಚಟುವಟಿಕೆಗಳು ಮೂಡಿ ಬರುವಂತಾಗಲಿ ಎಂದು ಹಾರೈಸಿದರು.
ಶ್ರೀ ನಾಗರಾಜ ಸೇವಾ ಸಮಿತಿ ಬಂಕೇರ್ಕಟ್ಟ ಇದರ ಗೌರವಾಧ್ಯಕ್ಷ ವಿಶ್ವನಾಥ್ ಹೆಗ್ಡೆ, ಹಡಿಲು ಭೂಮಿ ಕೃಷಿಕ ರಿಕೇಶ್ ಪಾಲನ್ ಕಡೆಕಾರು, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಭಾರತಿ ಭಾಸ್ಕರ್ ಮಾತನಾಡಿ, ಮಾಜಿ ಶಾಸಕ ಕೆ.ರಘುಪತಿ ಭಟ್ ರವರ ಕ್ರಾಂತಿಕಾರಿ ಹಡಿಲು ಭೂಮಿ ಕೃಷಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಯುವಜನತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆತಿದೆ. ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವ ಜೊತೆಗೆ ಯುವ ಜನತೆ ಹಡಿಲು ಭೂಮಿ ಕೃಷಿ ಸಹಿತ ತಮ್ಮ ಮನೆಯ ತೋಟಗಳಲ್ಲಿ ತರಕಾರಿ ಬೆಳೆಯ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅಗತ್ಯತೆ. ಈ ನಿಟ್ಟಿನಲ್ಲಿ ಸ್ವಾಮಿ ಫ್ರೆಂಡ್ಸ್ ತಂಡದ ಪ್ರಯತ್ನ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಪ್ರಭಾರ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಒಂದು ದಿನ ಪೂರ್ತಿ ಗ್ರಾಮಸ್ಥರೆಲ್ಲ ಒಂದಾಗಿ ಪ್ರಕೃತಿಯ ಮಡಿಲ ಕೆಸರು ಗದ್ದೆಯ ಆಟೋಟಗಳಲ್ಲಿ ಸ್ವೇಚ್ಛೆಯಿಂದ ಪಾಲ್ಗೊಳ್ಳುವ ಸದವಕಾಶವನ್ನು ಸ್ವಾಮಿ ಫ್ರೆಂಡ್ಸ್ ತಂಡ ಒದಗಿಸಿದೆ. ಗ್ರಾಮೀಣ ಭಾಗದ ಭವ್ಯ ಪರಂಪರೆ, ಸಾಂಸ್ಕೃತಿಕ ವೈಭವವನ್ನು ಮೆಲುಕು ಹಾಕುವ ಕ್ಷಣ ಇದಾಗಿದೆ. ಇದರ ಜೊತೆಗೆ ಯುವ ಜನತೆ ಹಾಗೂ ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಮಾಜಿ ಶಾಸಕ ಕೆ.ರಘುಪತಿ ಭಟ್ ರವರ ಉದಾತ್ತ ಯೋಜನೆ ಹಡಿಲು ಭೂಮಿ ಕೃಷಿಯಲ್ಲಿಯೂ ತೊಡಗಿಸಿಕೊಳ್ಳುವ ಹುಮ್ಮಸ್ಸು ಇಮ್ಮಡಿಯಾಗಿದೆ. ಈ ಮಾದರಿ ಕಾರ್ಯಕ್ರಮವನ್ನು ಆಯೋಜಿಸುವ ಜೊತೆಗೆ ಹಿರಿಯ ಕೃಷಿಕ ಮಹಿಳೆಯರನ್ನು ಗೌರವಿಸಿ ಪ್ರೋತ್ಸಾಹಿಸಿದ ಸ್ವಾಮಿ ಫ್ರೆಂಡ್ಸ್ ತಂಡದ ಸರ್ವ ಸದಸ್ಯರಿಗೆ ಹಾಗೂ ‘ಕೆಸರ್ದ ಗೊಬ್ಬು’ ಗ್ರಾಮೀಣ ಕ್ರೀಡಾ ಕೂಟದ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಸುವರ್ಣ, ಸ್ಥಳೀಯ ಕೃಷಿಕ ಪಟೇಲರ ಮನೆ ಶರತ್ ಶೆಟ್ಟಿ, ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್, ಸ್ಥಳೀಯರಾದ ಭುವನೇಂದ್ರ ಮೈಂದನ್, ಕಾರ್ಯಕ್ರಮದ ಸಂಯೋಜಕರಾದ ಸ್ವಾಮಿ ಫ್ರೆಂಡ್ಸ್ ತಂಡದ ವಿನೋದ್ ಪೂಜಾರಿ, ಸಂದೇಶ್ ಹಾಗೂ ಸಂಸ್ಥೆಯ ಸರ್ವ ಸದಸ್ಯರು, ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಯುವ ಜನತೆ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಬಾಲಕೃಷ್ಣ ಶೆಟ್ಟಿ ನಿಟ್ಟೂರು ಕ್ರೀಡಾ ಕೂಟಕ್ಕೆ ಆಗಮಿಸಿ ಶುಭ ಹಾರೈಸಿದರು.
ಶಿವಾನಂದ ಕಟ್ಟೆಗುಡ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು