ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ೨೦೨೪-೨೫ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪರವಾಗಿ ರಂಜಿತ್ ಕುಮಾರ್ ಮಾತನಾಡಿ ಸರಕಾರ ಯೋಜನೆಗಳನ್ನು ಸಮರ್ಪಕವಾಗಿ ಮನೆ ಮನೆಗೆ ತಲುಪಿಸುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ವೇತನ ದುಪ್ಪಟ್ಟು ಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಯ ಗಮನ ಸೆಳೆದರಲ್ಲದೆ ಪ್ರತಿವರ್ಷ ಭತ್ತ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ದರ ಪಾತಾಳಕ್ಕೆ ಕುಸಿಯುತ್ತದೆ, ಕೃಷಿಕರಿಗೆ ಅನುಕೂಲಕರ ವಾತಾವರಣ ಸೃಷ್ಠಿಸಲು ಭತ್ತ ಸಂಗ್ರಹ ಕೇಂದ್ರ ಸ್ಥಾಪಿಸಬೇಕು,ಅದೇ ರೀತಿ ಸಮಗ್ರ ದರ ಸಿಗುವಂತೆ ಕೃಷಿ ಇಲಾಖೆಯ ಗಮನ ಸೆಳೆದರು.
ಇದೇ ವೇಳೆ ಮಳೆಗಾಲದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಮೆಸ್ಕಾಂ ಲೈನ್ ಮೆನ್‌ಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಇನ್ನುಳಿದಂತೆ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಪಂಗಡದ ರಿಗೆ ವೈದ್ಯಕೀಯ ನೆರವು,ಕ್ರೀಡಾ ಮಟ್ಟದಲ್ಲಿ ಸಾಧನೆಗೈದವರಿಗೆ ಪ್ರೋತ್ಸಾಹಧನ,ಗ್ರಾಮ ವ್ಯಾಪ್ತಿಯ ಎರಡು ಸರಕಾರಿ ಶಾಲೆಗಳಿಗೆ ಕ್ರೀಡಾ ಪರಿಕರ ಸಹಾಯಧನ, ವಿವಿಧ ಯೋಜನೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಫಲಾನುಭವಿಗಳ ಅರ್ಜಿ ಸ್ವೀಕರಿಸಲಾಯಿತು. ಹಾಗೂ ಗ್ರಾಮ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ,ಪಂಚಾಯತ್ ಸದಸ್ಯರು, ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ನೋಡೆಲ್ ಅಧಿಕಾರಿ ಡಾ.ಅನಿಲ್ ಕುಮಾರ್ ಪ್ರಾಸ್ತಾವನೆ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿ, ಸಭೆ ನಿರ್ವಹಿಸಿದರು.ಪಂಚಾಯತ್ ಸಿಬ್ಬಂದಿ ಶಕೀಲ ಎನ್ ಪೂಜಾರಿ,ಕಾರ್ಯದರ್ಶಿ ಸುಮತಿ ಅಂಚನ್ ವಿವಿಧ ವರದಿ ಮಂಡಿಸಿದರು.ಸಿಬ್ಬಂದಿ ನವೀನ್ ವಂದಿಸಿದರು.