ಉಳ್ಳಾಲ : ಇಲ್ಲಿನ ಸೋಮೇಶ್ವರ ಉಚ್ಚಿಲದ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಮೃತಪಟ್ಟಿರುವ ಘಟನೆ ನಿನ್ನೆ ಭಾನುವಾರ ಸಂಭವಿಸಿದೆ.
ಮೈಸೂರು ವಿಜಯನಗರ ದೇವರಾಜ್ ಮೊಹಲ್ಲಾ ನಿವಾಸಿ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್. (21 ವರ್ಷ), ಕುರುಬರಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ .(21ವರ್ಷ) ಹಾಗೂ ಕೆ.ಆರ್. ಮೊಹಲ್ಲಾದ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಎಂ.ಎನ್. ಶ್ರೀನಿವಾಸ್ ಎಂಬವರ ಪುತ್ರಿ ಪಾರ್ವತಿ ಎಸ್. (20ವರ್ಷ) ಮೃತರು.
ಶನಿವಾರ ರೆಸಾರ್ಟ್‌ಗೆ ಮೂವರು ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಭಾನುವಾರ ಬೆಳಗ್ಗೆ ಚಹಾ ಮುಗಿಸಿ 10.05ಕ್ಕೆ ರೆಸಾರ್ಟ್ ಮುಂಭಾಗದಲ್ಲಿರುವ ಈಜುಕೊಳದಲ್ಲಿ ಆಟವಾಡುವ ಸಂದರ್ಭ ಈ ಘಟನೆ ನಡೆದಿದೆ. ಸಿ.ಸಿ. ಟಿವಿಯಲ್ಲಿ ದಾಖಲಾಗಿರುವ ದೃಶ್ಯದಂತೆ ಅರ್ಧ ಗಂಟೆ ಕಾಲ ಇವರು ಈಜುಕೊಳದಲ್ಲಿ ಈಜಾಡುತ್ತಿದ್ದರು. ಬಳಿಕ ಅಲ್ಲೇ ಈಜುಗಾರರ ಸುರಕ್ಷತೆಗೆ ಇಡಲಾಗಿದ್ದ ಟಯರ್ ಟ್ಯೂಬ್‌ನ್ನು ಹಿಡಿಯಲು ಓರ್ವ ವಿದ್ಯಾರ್ಥಿನಿ ಮುಂದೆ ಹೋಗಿದ್ದಾಳೆ. ಈ ವೇಳೆ ಆಯತಪಿದ ಆಕೆಯನ್ನು ರಕ್ಷಿಸಲು ಹೋದ ಇನ್ನೊಬ್ಬಳು ಮುಳುಗಿದ್ದಾಳೆ. ಉಳಿದ ಇನ್ನೊಬ್ಬಳೂ ಇವರನ್ನು ರಕ್ಷಿಸಲು ಹೋಗಿ ತಾನೂ ನೀರಲ್ಲಿ ಮುಳುಗಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೆಸಾರ್ಟ್ ಸಿಬ್ಬಂದಿ ಉಪಾಹಾರ ತಯಾರಿಗೆಂದು ಅಡುಗೆ ಕೋಣೆಯಲ್ಲಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮುಳುಗೇಳುತ್ತಿದ್ದ ವಿದ್ಯಾರ್ಥಿಗಳಿಗೆ ಬೊಬ್ಬೆ ಹಾಕಲು ಸಾಧ್ಯವಾಗಿಲ್ಲ. ಇದರಿಂದಾಗಿ ರೆಸಾರ್ಟ್ ಒಳಗಿದ್ದ ಸಿಬ್ಬಂದಿಗೂ ಘಟನೆ ಅರಿವಿಗೆ ಬಂದಿಲ್ಲ. ವಿದ್ಯಾರ್ಥಿನಿಯರು ತಾವು ಈಜುಕೊಳಕ್ಕೆ ಇಳಿಯುವ ಮೊದಲು ಈಜುಕೊಳದ ಹ್ಯಾಂಡ್ ರೈಲಿಂಗ್‌ನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಆನ್ ಮಾಡಿಟ್ಟು ಹೋಗಿದ್ದರು. ಇಡೀ ಘಟನೆಯ ದೃಶ್ಯಗಳು ರೆಸಾರ್ಟ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. ರೆಸಾರ್ಟ್ ನಿಯಮದ ಪ್ರಕಾರ ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿನಿಯರು ಚೆಕ್ ಔಟ್ ಮಾಡಬೇಕಿತ್ತು. ಅದಕ್ಕೂ ಮುನ್ನ ಈಜಲು ತೆರಳಿದ್ದು, ಆ ಸಂದರ್ಭದಲ್ಲಿ ಅವಘಡ ಸಂಭವಿಸಿದೆ