ಕುಂದಾಪುರ : ವಿಧಾನಸಭೆ ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಮಾಲೋಚಿಸಿ ಕಾನೂನು ರೂಪಿಸಿದ ಮಾತ್ರಕ್ಕೆ ದೇಶ ಬಲಿಷ್ಠವಾಗುವುದಿಲ್ಲ. ಪ್ರತಿಯೊಂದು ತರಗತಿ ಕೋಣೆಯಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಭವ್ಯ ಭಾರತದ ಭವಿಷ್ಯ ಬಲಿಷ್ಠಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಡಾ. ಎಚ್.ಎಸ್. ಶೆಟ್ಟಿಯವರ ಕಾರ್ಯ ಶ್ಲಾಘನೀಯವಾಗಿದೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ನಿನ್ನೆ ಶನಿವಾರ ಜುಲೈ 6 ರಂದು ಬೈಂದೂರು ಜೆ.ಎನ್. ಆರ್. ಸಭಾಂಗಣದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೈಂದೂರು ಜನಸೇವಾ ಚಾರಿಟೆಬಲ್ ಟ್ರಸ್ಟ್ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ 350 ಸರಕಾರಿ ಶಾಲೆಯ 41,000 ಸಮವಸ್ತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮಾತನಾಡಿದರು.
ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಚ್.ಎಸ್. ಶೆಟ್ಟಿ ಆಶಯದಂತೆ ನಿರ್ಮಾಣವಾಗುವ ಕೊರಗರ ಮನೆಗಳನ್ನು ಬೈಂದೂರು ಕ್ಷೇತ್ರದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ನಿರ್ಮಾಣ ಮಾಡಲು ಆದ್ಯತೆ ನೀಡಬೇಕು ಎಂದು ವಿನಂತಿಸಿದರು.
ಅಕ್ಷಯ ಮೊಳವಳ್ಳಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಸ್ವಾಗತಿಸಿ ಶಿಕ್ಷಕ ರಾಜೀವ ಶೆಟ್ಟಿ ವಂದಿಸಿದರು.