ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿದರೋಡೆ, ಕಳ್ಳತನ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಮಂಗಳವಾರ ನಸುಕಿಗೆ ಕೋಟೆಕಣಿ ಒಂದನೇ ಕ್ರಾಸ್ ಮನೆಯೊಂದಕ್ಕೆ ನುಗ್ಗಿ ಮನೆಯಿಂದ ಅಪಾರ ಪ್ರಮಾಣದ ನಗ- ನಗದು ದರೋಡೆ ಮಾಡಲಾಗಿದೆ.
ಈ ನಡುವೆ ಸಿನಿಮೀಯ ಮಾದರಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನೆ ನಡೆದ ಐದೇ ಗಂಟೆಗಳಲ್ಲಿ ಆರೋಪಿಗಳನ್ನು ಸೊತ್ತು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ವರು ಆರೋಪಿಗಳು ಪೊಲೀಸ್ ವಶದಲ್ಲಿ
ಕೋಟೆಕಣಿಯ ಮನೆಯಲ್ಲಿದ್ದ ವೃದ್ಧ ದಂಪತಿಗೆ ಹಲ್ಲೆ ನಡೆಸಿದ ದರೋಡೆಕೋರರ ಗುಂಪು, ಸುಮಾರು 12 ಲಕ್ಷ ರೂ. ಮೌಲ್ಯದ ಚಿನ್ನ ವಜ್ರದ ಆಭರಣ, ಮೊಬೈಲ್ ಫೋನ್ ಮತ್ತು ರೂ. 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್‌ಗಳು, 3000 ರೂ. ನಗದು ಹಣ ಹೊತ್ತಿಯಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳು ಈಗ ಪೊಲೀಸ್ ವಶದಲ್ಲಿದ್ದಾರೆ. ಚಡ್ಡಿ- ಬನಿಯಾನ್, ಮುಖಕ್ಕೆ ಮಂಕಿಕ್ಯಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
ಕೃತ್ಯ ನಡೆದ ಐದು ಗಂಟೆಯೊಳಗೆ ಬಂಧನ
ಪ್ರಕರಣ ನಡೆದ ಮಾಹಿತಿ ದೊರೆತ ಕೂಡಲೇ ಉರ್ವ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ತಕ್ಷಣ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದರು. ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲಟ್ಟ ಕಾರನ್ನು ಪತ್ತೆಮಾಡಿ ವಶಕ್ಕೆ ಪಡೆದು ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಗುಮಾನಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳಗಿನ ಜಾವ ಮೂಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಗಿ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರುಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿ, ಅದೇ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು. ಅವರ ಮಾಹಿತಿಯಂತೆ ಅದೇ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ಬಗ್ಗೆ ವಿವರ ಪಡೆದು, ಬಸ್ಸು ನಿರ್ವಾಹಕರನ್ನು ಸಂಪರ್ಕಿಸಿ ಅವರು ತಿಳಿಸಿದ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿತ್ತು. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಯ ತಂಡ ಸಕಲೇಶಪುರ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವೆಸಗಿದ ಬಗ್ಗೆ ಆರೋಪಿಗಳು ಒಪ್ಪಿದ್ದು, ಅವರ ವಶದಲ್ಲಿದ್ದ ಮಂಗಳೂರು ನಗರದಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಹಾಗೂ ಹಣವನು ವಶಪಡಿಸಿ ಉರ್ವ ಪೊಲೀಸ್ ಅಧಿಕಾರಿಗಳಿಗೆ ವಶಕ್ಕೆ ನೀಡಿದ್ದಾರೆ ತನಿಖೆ ಮುಂದುವರಿದಿದೆ